ಬೆಂಗಳೂರಲ್ಲಿ ವಾಲಿದ ಮತ್ತೊಂದು ಕಟ್ಟಡ, ಆತಂಕದಲ್ಲಿ 32 ಪೊಲೀಸ್ ಕುಟುಂಬಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.16- ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಕಟ್ಟಡ ವಾಲಿದೆ. ಇದರಿಂದ 32 ಪೊಲೀಸ್ ಕುಟುಂಬಗಳು ಜೀವ ಕೈಯಲ್ಲಿಡಿದು ಜೀವನ ಸಾಗಿಸುವಂತಾಗಿದೆ. ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಈಗಾಗಲೇ ಆರು ಪ್ರದೇಶಗಳಲ್ಲಿ ಕಟ್ಟಡಗಳು ವಾಲಿ ಭಾರೀ ಪ್ರಮಾದ ಸೃಷ್ಟಿಸಿತ್ತು. ಇದೀಗ ಬಿನ್ನಿಪೇಟೆ ಸಮೀಪ ಪೊಲೀಸರಿಗಾಗಿ ನಿರ್ಮಿಸಿರುವ ವಸತಿ ಸಮುಚ್ಚಯದ ಒಂದು ಕಟ್ಟಡ ವಾಲಿರುವುದು ಆತಂಕಕ್ಕೆ ಕಾರಣವಾಗಿದೆ.

ಕೇವಲ ಎರಡು ವರ್ಷಗಳ ಹಿಂದೆಯಷ್ಟೆ ನಿರ್ಮಿಸಲಾಗಿರುವ ಈ ಪೊಲೀಸ್ ಕ್ವಾಟ್ರರ್ಸ್‍ನ ಬಿ ಬ್ಲಾಕ್‍ನಲ್ಲಿರುವ ಏಳು ಅಂತಸ್ತಿನ ಕಟ್ಟಡ ಸುಮಾರು ಒಂದು ಅಡಿ ವಾಲಿರುವುದು ಕಂಡುಬಂದಿದೆ.

ವಾಲಿರುವ ಕಟ್ಟಡದಲ್ಲಿ 32 ಪೊಲೀಸ್ ಕುಟುಂಬಗಳು ವಾಸಿಸುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ಬೇರೆಡೆ ಸ್ಥಳಾಂತರ ಮಾಡಲು ಚಿಂತನೆ ನಡೆಸಲಾಗಿದೆ. ಕೇವಲ ಎರಡು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡ ವಾಲಿರುವುದನ್ನು ಗಮನಿಸಿದರೆ ಇಡೀ ಕಾಮಗಾರಿ ಕಳಪೆ ಕಾಮಗಾರಿ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಈ ಕುರಿತಂತೆ ಸಂಬಂಧಪಟ್ಟ ಎಂಜಿನಿಯರ್ ಅವರನ್ನು ಪ್ರಶ್ನಿಸಿದರೆ ಈ ಕಟ್ಟಡವನ್ನು ಜಪಾನ್ ಟೆಕ್ನಾಲಜಿಯಿಂದ ನಿರ್ಮಿಸಲಾಗಿದೆ. ಯಾವುದೇ ಆತಂಕ ಬೇಡ ಎಂದು ಸಬೂಬು ಹೇಳುತ್ತಿದ್ದಾರೆ. ಆದರೆ, ವಾಲಿರುವ ಕಟ್ಟಡ ಒಂದು ವೇಳೆ ಬಿದ್ದರೆ 32 ಪೊಲೀಸ್ ಕುಟುಂಬಗಳ ಗತಿ ಏನು ಎಂಬ ಆತಂಕ ಎದುರಾಗಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಕಮಲ್‍ಪಂತ್ ಅವರು ವಾಲಿರುವ ವಸತಿ ಸಮುಚ್ಚಯದಲ್ಲಿ ವಾಸಿಸುತ್ತಿರುವ ಪೊಲೀಸ್ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವ ಭರವಸೆ ನೀಡಿದ್ದಾರೆ.

Facebook Comments

Sri Raghav

Admin