ಆರಕ್ಷಕರಿಗೆ ಉತ್ತಮ ಸೂರು : ಸಚಿವ ಕೆ.ಗೋಪಾಲಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಅರಸೀಕೆರೆ, ಅ.18- ನಾಗರಿಕರ ಆಸ್ತಿಪಾಸ್ತಿ ರಕ್ಷಣೆ ಮಾಡುವ ಆರಕ್ಷಕರಿಗೆ ಸುಸಜ್ಜಿತ ಯೋಗ್ಯವಾದ ಮನೆಗಳನ್ನು ಗುತ್ತಿಗೆದಾರರು ನಿರ್ಮಾಣ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ
ತಿಳಿಸಿದರು.

ನಗರದ ಪೊಲೀಸ್ ಕ್ವಾಟ್ರಸ್ ಬಳಿ 7 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೊಲೀಸ್ ವಸತಿ ಸಮುಚ್ಛಯದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಮ್ಮ ಪ್ರಾಣದ ಹಂಗು ತೊರೆದು ಹಗಲು-ರಾತ್ರಿ ಎನ್ನದೆ ಕಾರ್ಯ ನಿರ್ವಹಿಸುವ ಆರಕ್ಷಕರಿಗೆ ಸರಿಯಾದ ವಾಸದ ಮನೆಗಳಿಲ್ಲದೆ ಅವರ ಕುಟುಂಬ ಆತಂಕದಲ್ಲಿ ದಿನ ಕಳೆಯುವಂತಹ ಪರಿಸ್ಥಿತಿ ಇತ್ತು.

ಇದನ್ನು ಮನಗಂಡ ಸರ್ಕಾರ ಸುಸಜ್ಜಿತ ಮನೆಗಳ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿದೆ ಎಂದರು. ರಾಜ್ಯದಲ್ಲಿ ಕೊರೊನಾ ಮಹಾಮಾರಿ ಹಾವಳಿಯಿಂದ ಆರ್ಥಿಕ ಪರಿಸ್ಥಿತಿ ಕುಂಠಿತವಾಗಿದ್ದು, ರಾಜ್ಯದ ಅಭಿವೃದ್ಧಿ ಮೇಲೆ ತೀವ್ರ ಪರಿಣಾಮ ಬೀರಿದೆ.

ಈ ಮಾರಾಣಾಂತಿಕ ಸೋಂಕಿನಿಂದ ನಮ್ಮ ನಿಮ್ಮ ಕುಟುಂಬವನ್ನು, ನಿಮ್ಮ ಗ್ರಾಮ ಮೊಹಲ್ಲಾಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದರು. ಹಾಸನ, ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರದಲ್ಲಿ ಹೆಚ್ಚು ಸೋಂಕು ಕಂಡು ಬರುತ್ತಿದ್ದು, ಹೆಚ್ಚು ಹೆಚ್ಚು ಜನರನ್ನು ಪರೀಕ್ಷೆ ಮಾಡಲು ಒತ್ತು ನೀಡಿದ್ದೇವೆ.

ಸರ್ಕಾರದಿಂದ ಕೋವಿಡ್ ವಿಚಾರವಾಗಿ ಹಣಕಾಸಿನ ತೊಂದರೆ ಇಲ್ಲ. ಕಾಲಕಾಲಕ್ಕೆ ಆ ತಾಲೂಕಿಗೆ ನೀಡಬೇಕಾದ ಅನುದಾನವನ್ನು ಆಯಾ ತಾಲೂಕಿಗೆ ನೀಡಲಾಗುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಗೋಪಾಲ ಸ್ವಾವಿ, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾ ಪೊಲಿಸ್ ವರಿಷ್ಠಾಕಾರಿ ಶ್ರೀನಿವಾಸ್ ಗೌಡ, ಸಿಇಒ ಪರಮೇಶ್, ತಹಸೀಲ್ದಾರ್ ಸಂತೋಷ್ ಕುಮಾರ್, ತಾಪಂ ಇಒ ನಟರಾಜ್, ಬಿಇಒ ಮೋಹನ್ ಕುಮಾರ್, ತಾಪಂ ಅಧ್ಯಕ್ಷೆ ರೂಪಾ ಗುರುಮೂರ್ತಿ, ನಗರಸಭಾ ಆಯುಕ್ತ ಕಾಂತರಾಜ್ ಹಾಗೂ ಇನ್ನಿತರರಿದ್ದರು.

Facebook Comments

Sri Raghav

Admin