ಬಂಧಿತ ಆರೋಪಿಗೆ ಕೊರೊನಾ ಪಾಸಿಟಿವ್, ಮುಳಬಾಗಿಲು ಪೊಲೀಸ್ ಠಾಣೆ ಸೀಲ್ಡೌನ್..!
ಮುಳಬಾಗಿಲು, ಜೂ.16- ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ ಆರೋಪಿಗೆ ಕೊರೊನಾ ತಗುಲಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮುಳಬಾಗಿಲು ಪೊಲೀಸ್ ಠಾಣೆಯನ್ನು ಸೀಲ್ಡೌನ್ ಮಾಡಲಾಗಿದ್ದು, ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆತನ ಆರೋಗ್ಯ ತಪಾಸಣೆ ಮಾಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಆತನಿಗೆ ಕೊರೊನಾ ಸೋಂಕು ತಗುಲಿರುವ ವರದಿ ಬಂದಿತ್ತು..!
ತಕ್ಷಣ ಎಚ್ಚೆತ್ತ ಅಧಿಕಾರಿಗಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಆತನನ್ನು ಬಂಧಿಸಿದ್ದ ಕಾನ್ಸ್ಟೇಬಲ್ಗಳು ಠಾಣೆಗೆ ಕರೆ ತಂದ ಸಂದರ್ಭದಲ್ಲಿ ವಿಚಾರಣೆ ನಡೆಸಿದ ಸಬ್ ಇನ್ಸ್ಪೆಕ್ಟರ್ ಹಾಗೂ ಕರ್ತವ್ಯದಲ್ಲಿದ್ದ 22 ಸಿಬ್ಬಂದಿಗಳನ್ನು ಈಗ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ಕಳೆದ ರಾತ್ರಿಯೇ ಪೊಲೀಸ್ ಠಾಣೆಯ ಒಳಗೆ, ಹೊರಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ. ಠಾಣೆ ಸುತ್ತಮುತ್ತಲಿನ ಪ್ರದೇಶದಲ್ಲಿ ಜನರ ಓಡಾಟವನ್ನು ಕೂಡ ನಿರ್ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗಿದ್ದು , ಯಾರಿಗಾದರೂ ಸೋಂಕು ತಗುಲಿದೆಯೇ ಎಂಬ ಬಗ್ಗೆ ಇಂದು ಸಂಜೆ ವರದಿ ಬರಲಿದ್ದು , ಎಲ್ಲರಲ್ಲೂ ಆತಂಕ ಮನೆ ಮಾಡಿದೆ.