50 ಜೀವಂತ ಗುಂಡು ಕದ್ದು ಆತ್ಮಹತ್ಯೆ ಹೈಡ್ರಾಮಾ ಮಾಡಿದ ಪೊಲೀಸಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಟಿ.ನರಸೀಪುರ, ಮೇ 4- ಪೊಲೀಸ್ ಠಾಣೆಯಲ್ಲಿದ್ದ 50 ಜೀವಂತ ಗುಂಡುಗಳು ಕಳುವು ಆರೋಪದಿಂದ ಬಚಾವ್ ಆಗಲು ಕಾನ್ಸ್‍ಟೆಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಳ್ಳುವ ಹೈಡ್ರಾಮಾ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.  ಪಟ್ಟಣ ಪೊಲೀಸ್ ಠಾಣೆಯಲ್ಲಿ 303 ಬಂದೂಕಿನ 50 ಜೀವಂತ ಗುಂಡುಗಳು ಕಳುವಾಗಿದ್ದವು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಟರ್ ಕೃಷ್ಣೇಗೌಡ ಹಾಗೂ ಮುಖ್ಯಪೇದೆ ಲಿಂಗರಾಜು ಅವರನ್ನು ಅಮಾನತುಗೊಳಿಸಲಾಗಿತ್ತು. ಇಲಾಖೆಯ ಅನುಮಾನ ರೈಟರ್ ಕೃಷ್ಣೇಗೌಡರ ಮೇಲೆಯೇ ಇತ್ತು. ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು.

ಆದರೆ, ಅಮಾನತು ಆದೇಶ ಹೊರಬೀಳುತ್ತಿದ್ದಂತೆ ಕೃಷ್ಣೇಗೌಡ ಆತ್ಮಹತ್ಯೆಯ ಹೈಡ್ರಾಮಾ ನಡೆಸಲು ಹೋಗಿ ಸಿಕ್ಕಿಬಿದ್ದಿದ್ದು, ಗುಂಡು ಕಳುವು ಮಾಡಿರುವುದು ಅವರೇ ಇರಬೇಕು ಎಂಬ ಅನುಮಾನ ವ್ಯಕ್ತವಾಗಿದೆ.ಅಮಾನತು ಆದೇಶ ಹೊರ ಬೀಳುತ್ತಿದ್ದಂತೆ ವಿಚಲಿತನಾದ ಕೃಷ್ಣೇಗೌಡ ದ್ವಿಚಕ್ರ ವಾಹನದಲ್ಲಿ ತಾಲೂಕಿನ ಮನ್ನೇಹುಂಡಿ ಗ್ರಾಮದ ನದಿ ದಂಡೆಗೆ ತೆರಳಿ ತನ್ನ ವಸ್ತ್ರಗಳನ್ನು ಕಳಚಿ ಸ್ಕೂಟರ್ ಮೇಲಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವಂತೆ ಸನ್ನಿವೇಶ ಸೃಷ್ಟಿಸಿದ್ದ.

ಬಳಿಕ ಅಲ್ಲಿಂದ ನದಿ ದಂಡೆಯಲ್ಲೇ ನಡೆದುಕೊಂಡು ಹೋಗಿ ಹುಣಸೂರು ಗ್ರಾಮದ ಹುಲ್ಲಿನ ಮೆದೆಯೊಂದರಲ್ಲಿ ಅವಿತು ಕುಳಿತು ತನ್ನ ಸಂಬಂಧಿಕರಿಗೆ ಕಾರು ತೆಗೆದುಕೊಂಡು ಬರುವಂತೆ ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಗ್ರಾಮದಲ್ಲಿ ಕೃಷ್ಣೇಗೌಡನ ವರ್ತನೆ ಗಮನಿಸಿದ ಗ್ರಾಮಸ್ಥರು ಗಾಬರಿಗೊಂಡು ಪಟ್ಟಣ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.

ತಕ್ಷಣವೇ ಕಾರ್ಯ ಪ್ರವೃತ್ತರಾದ ಡಿವೈಎಸ್‍ಪಿ ಪ್ರಭಾಕರ್ ಸಿಂಧೆ ಹಾಗೂ ಸಿಪಿಐ ಎಂ.ಆರ್.ಲವ ನೇತೃತ್ವದ ಪೊಲೀಸ್ ತಂಡ ಕೃಷ್ಣೇಗೌಡನ ಹುಡುಕಾಟದಲ್ಲಿ ತೊಡಗಿತು. ತೀವ್ರ ಹುಡುಕಾಟದ ನಂತರ ಹುಣಸೂರು ಗ್ರಾಮದ ಹುಲ್ಲಿನ ಮೆದೆಯಲ್ಲಿ ಅರೆ ಬೆತ್ತಲೆಯಾಗಿ ಅವಿತು ಕುಳಿತಿದ್ದ ಆತನನ್ನು ವಶಕ್ಕೆ ಪಡೆದು ಪಟ್ಟಣ ಠಾಣೆಗೆ ಕರೆ ತರಲಾಯಿತು.

ಆತನನ್ನು ತೀವ್ರ ವಿಚಾರಣೆಗೊಳಪಡಿಸಿ ಹೆಚ್ಚಿನ ವಿಚಾರಣೆಗಾಗ್ನಿ ಮೈಸೂರಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಕರೆದೊಯ್ಯಲಾಯಿತು. ಕೃಷ್ಣೇಗೌಡನೇ ಗುಂಡು ಕದ್ದು ಅಪವಾದದಿಂದ ತಪ್ಪಿಸಿಕೊಳ್ಳಲು ಪೊಲೀಸರ ದಾರಿ ತಪ್ಪಿಸಲು ಈ ರೀತಿ ನಾಟಕ ವಾಡಿದನೇ? ಗುಂಡುಗಳನ್ನು ಕದ್ದಿದ್ದಲ್ಲಿ ಕದ್ದ ಗುಂಡುಗಳು ಏನಾದವು? ಕಳುವಿನ ಉದ್ದೇಶವಾದರೂ ಏನು? ಎಂಬ ಸತ್ಯಾಸತ್ಯತೆ ತನಿಖೆಯಿಂದಷ್ಟೇ ಹೊರಬರಬೇಕಿದೆ.

Facebook Comments