ರಕ್ಷಣೆ-ಭದ್ರತೆ-ಸಮಯಪ್ರಜ್ಞೆ ಪೊಲೀಸರಿಗೆ ಅತಿಮುಖ್ಯ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜೂ.18- ತರಬೇತಿ ಪಡೆದ ಪೊಲೀಸರು ಮೊದಲು ಸಾರ್ವಜನಿಕರ ರಕ್ಷಣೆ, ಭದ್ರತೆ ಮತ್ತು ಸಮಯ ಪ್ರಜ್ಞೆಯನ್ನು ಮೈಗೂಡಿಸಿಕೊಂಡು ಸಮರ್ಥವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕಾರಾಗೃಹ ಇಲಾಖೆಯ ಐಜಿಪಿ ರೇವಣ್ಣ ಇಂದಿಲ್ಲಿ ಕಿವಿಮಾತು ಹೇಳಿದರು.

ತುಮಕೂರಿನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ ಒಂದನೇ ತಂಡದ ಕಾರಾಗೃಹ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿದರು.

ಕಾರಾಗೃಹ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಆರೋಪಿಗಳು ಜೈಲಿಗೆ ಬರುವ ಮುನ್ನ ಹೊರಗೆ ಹುಲಿಯಂತೆ ಇರುತ್ತಾರೆ. ಜೈಲಿನೊಳಗೆ ಬಂದರೆ ಇಲಿಯಂತಾಗಿ ಪರಿವರ್ತನೆಗೊಂಡು ಹೊರ ಹೋದ ನಂತರ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಜೀವಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಕಾರಾಗೃಹವು ಒಂದು ರೀತಿ ಮನ ಪರಿವರ್ತನಾ ಕೇಂದ್ರವಾಗಿದೆ ಎಂದರು.

ಬೆಂಗಳೂರು ಕಾರಾಗೃಹಗಳಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಎರಡು ಕೋಟಿ ರೂ.ಗಳನ್ನು ಸರ್ಕಾರ ವಿನಿಯೋಗಿಸಿದೆ. ಸನ್ನಡತೆ ಆಧಾರದ ಮೇಲೆ 2015ರ ಸೆಪ್ಟೆಂಬರ್‍ನಿಂದ 2018ರ ಅವಧಿಯಲ್ಲಿ 1352 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಬೆಂಗಳೂರು, ಮಂಗಳೂರು, ಬೀದರ್, ವಿಜಯಪುರ, ಹಾಸನಗಳಲ್ಲಿ ನೂತನ ಕಾರಾಗೃಹಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಪ್ರತ್ಯೇಕ ಮಹಿಳಾ ಬಂಧಿಖಾನೆ ನಿರ್ಮಾಣದ ಜೊತೆಗೆ ಸರ್ಕಾರ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.

ಕಾರಾಗೃಹ ಇಲಾಖೆಗೆ 107 ಮಂದಿ ಸಿಬ್ಬಂದಿ, 32 ಮಂದಿ ಜೈಲರ್‍ಗಳು ನೇಮಕಗೊಂಡಿದ್ದಾರೆ. ಪೆÇಲೀಸ್ ತರಬೇತಿ ಕೇಂದ್ರಗಳಾದ ಖಾನಾಪುರ, ಬೆಳಗಾವಿ,ಧಾರವಾಡ, ಕಲಬುರಗಿ, ತುಮಕೂರು, ಮೈಸೂರು ಕೇಂದ್ರದಲ್ಲಿ ಒಂದು ವರ್ಷ ಐದು ತಿಂಗಳು ತರಬೇತಿ ಪಡೆದ ನಂತರ ಕಾರಾಗೃಹ ಇಲಾಖೆಗೆ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುತ್ತದೆ ಎಂದು ಹೇಳಿದರು.

ಹೆಚ್ಚುವರಿ ಪೆÇಲೀಸ್ ನಿರ್ದೇಶಕ ಮೆಘರಿಕ್ ಮಾತನಾಡಿ, ತರಬೇತಿ ಪಡೆದ ಸಿಬ್ಬಂದಿಗಳು ಕರ್ತವ್ಯ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು, ಯಾವುದೇ ಸನ್ನಿವೇಶ ಸಂದರ್ಭ ಬಂದರೂ ಧೃತಿಗೆಡದೆ ಕರ್ತವ್ಯ ಪಾಲನೆ ಮಾಡಬೇಕು,ರಾಜ್ಯ ಸರ್ಕಾರ ನಿರಂತರವಾಗಿ ನಮ್ಮ ಜೊತೆ ಇದೆ. ನಿಮ್ಮ ಹಾಗೂ ಕುಟುಂಬದ ರಕ್ಷಣೆಯನ್ನು ಇಲಾಖೆ ಗಣನೆಗೆ ತೆಗೆದುಕೊಳ್ಳುತ್ತದೆ ಎಂದು ಅವರು ಹೇಳಿದರು.

ಕೇಂದ್ರೀಯ ವಲಯದ ಐಜಿಪಿ ಶರತ್‍ಶ್ಚಂದ್ರ ಮಾತನಾಡಿ, ತಾತ್ಕಾಲಿಕ ಪೊಲೀಸ್ ಶಾಲೆಯಲ್ಲಿ ತರಬೇತಿ ಪಡೆದ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು, ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ ಮುಖ್ಯ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ.ಕೋನವಂಶಿಕೃಷ್ಣ , ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್ಪಿ ತಿಪ್ಪೇಸ್ವಾಮಿ, ಮಂಜುನಾಥ್, ವೆಂಕಟೇಶ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Facebook Comments