ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ, ಗೋವಾದಲ್ಲಿ 30 ರೂಮ್ ಬುಕ್, ಮತ್ತೆ ರೆಸಾರ್ಟ್‍ ಪಾಲಿಟಿಕ್ಸ್ ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ, ಮೇ 25- ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಗದ್ದುಗೆಗೇರಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ ರಾಜ್ಯದಲ್ಲಿ ಬಿಜೆಪಿ ಮತ್ತೊಂದು ಸುತ್ತಿನ ಆಪರೇಷನ್ ಕಮಲಕ್ಕೆ ಮುಂದಾಗಿದೆ.

ಅತೃಪ್ತ ಕಾಂಗ್ರೆಸ್ ಶಾಸಕರನ್ನು ಗೋವಾ ರೆಸಾರ್ಟ್‍ಗೆ ಕರೆದೊಯ್ಯಲು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಇದಕ್ಕಾಗಿ ಗೋವಾ ಫೆÇೀರ್ಟ್ ಅಗೂಡಾದಲ್ಲಿರುವ ದುಬಾರಿ ಫೈಸ್ಟಾರ್ ರೆಸಾರ್ಟ್ ತಾಜ್ ಹಾಲಿಡೇ ವಿಲೇಜ್‍ನಲ್ಲಿ 30 ರೂಮ್‍ಗಳನ್ನು ಬುಕ್ ಮಾಡಿರುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ಲೋಕಸಭೆ ಚುನಾವಣೆ ಫಲಿತಾಂಶ ಬಂತು. ದೋಸ್ತಿ ಸರ್ಕಾರ ಕೇವಲ ಎರಡು ಸೀಟುಗಳಲ್ಲಿ ಜಯಗಳಿಸಿ ಎಲ್ಲೆಡೆ ಹೀನಾಯ ಸೋಲು ಅನುಭವಿಸಿದೆ. ಎರಡೂ ಪಕ್ಷಗಳಲ್ಲಿ ವೈಮನಸ್ಸು ಉಂಟಾಗಿರುವುದರ ಲಾಭ ಪಡೆಯಲು ಮಾಸ್ಟರ್ ಪ್ಲಾನ್ ಮಾಡಿರುವ ಬಿಜೆಪಿ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದೆ.

ಈ ಹಿಂದೆ ಮುಂಬೈಗೆ ಅತೃಪ್ತ ಶಾಸಕರನ್ನು ಕರೆದೊಯ್ದು ನಡೆಸಿದ್ದ ಕಸರತ್ತು ವಿಫಲವಾಗಿತ್ತು. ಹಾಗಾಗಿ ಈ ಬಾರಿ ಆಪರೇಷನ್ ಕಮಲದ ಪ್ಲಾನ್‍ಅನ್ನು ಗೋವಾಕ್ಕೆ ಶಿಫ್ಟ್ ಮಾಡಲಾಗಿದೆ. ಮತ್ತೊಂದು ಸುತ್ತಿನ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗುವುದು ಗೋಚರವಾಗುತ್ತಿದೆ.

ಈ ಬಾರಿ ಕೆಲ ರೆಬೆಲ್ ಶಾಸಕರೇ ಖುದ್ದು ಕಾಂಗ್ರೆಸ್‍ನ ಬಂಡಾಯ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿಗೆ ದೂರವಾಣಿ ಕರೆ ಮಾಡಿ ದೇಶದಲ್ಲಿ ಬಿಜೆಪಿ ಹವಾ ಜೋರಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡು ಆಪರೇಷನ್ ಕಮಲಕ್ಕೆ ದಿನಾಂಕ ನಿಗದಿ ಮಾಡಿ ನಾವು ನಿಮ್ಮ ಜತೆ ಕೈ ಜೋಡಿಸಿದ್ದೇವೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪುಷ್ಟಿ ನೀಡುವಂತೆ ರಮೇಶ್ ಜಾರಕಿಹೊಳಿ ಅವರು ಇಂದು ಕಲಬುರಗಿಯಿಂದ ಖರ್ಗೆ ವಿರುದ್ಧ ಗೆಲುವು ಸಾಧಿಸಿದ ಉಮೇಶ್ ಜಾಧವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತೇದಾರ್ ಮುಂತಾದ ನಾಯಕರು ಉಪಸ್ಥಿತರಿದ್ದರು.

ಕಳೆದ ಬಾರಿ ಮುಂಬೈನಲ್ಲಿ ಆಪರೇಷನ್ ಕಮಲ ಪ್ರಯತ್ನ ನಡೆಸಿ ಶಾಸಕರ ಬಲ ಹೆಚ್ಚಾಗದೆ ಬರಿಗೈಲಿ ಮನೆಗೆ ಬಂದಿದ್ದ ರಮೇಶ್ ಅವರು ಈಗ ಗೋವಾದಲ್ಲಿ ಆಪರೇಷನ್ ಕಮಲದ ಆಟ ಶುರುವಿಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದಕ್ಕಾಗಿ ಗೋವಾದ ಪ್ರಭಾವಿ ಸಚಿವರಿಗೆ ಉಸ್ತುವಾರಿ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸಮುದ್ರದ ತೀರದಲ್ಲಿರುವ ಹೊಟೇಲ್‍ನ ಎರಡೂ ಕಡೆ ಬೀಚ್ ಇದ್ದು, ಒಂದು ಕಡೆ ಗುಡ್ಡವಿದೆಯಂತೆ. ಇದು ಭದ್ರತೆಗೆ ಸರಿಯಾದ ತಾಣ. ಯಾವುದೇ ಕ್ಷಣದಲ್ಲಿ ಶಾಸಕರು ಗೆಸ್ಟ್‍ಹೌಸ್‍ಗೆ ಬರುವ ಸಾಧ್ಯತೆ ಇದೆ ಎಂದು ಹೊಟೇಲ್ ಮ್ಯಾನೇಜ್‍ಮೆಂಟ್‍ಗೆ ಸೂಚನೆ ನೀಡಲಾಗಿದೆ.

ಈಗಾಗಲೇ ಗೋವಾದ ಉಸ್ತುವಾರಿ ಸಚಿವರು ಹೊಟೇಲ್‍ನ ಎಲ್ಲ ಸಿದ್ಧತೆಗಳನ್ನು ಪರಿಶೀಲಿಸಿಕೊಂಡು ಹೋಗಿದ್ದಾರೆ ಎಂದು ಹೇಳಲಾಗುತ್ತಿದ್ದು, ದೋಸ್ತಿ ಸರ್ಕಾರಕ್ಕೆ ಮತ್ತೆ ಆತಂಕ ಎದುರಾಗಿದೆ.

ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಅವರ ಕಡೆ ಮಹೇಶ್ ಕುಮಟಹಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಸೇರಿದಂತೆ ಅನೇಕ ಶಾಸಕರು ಸಂಪರ್ಕದಲ್ಲಿದ್ದಾರೆ. ಬಿಜೆಪಿ ಸರ್ಕಾರ ರಚನೆಯ ಮಾಸ್ಟರ್ ಗೇಮ್‍ಪ್ಲಾನ್ ರೂಪಿಸುತ್ತಿದ್ದರೆ ಇತ್ತ ದೋಸ್ತಿ ಸರ್ಕಾರ, ಸರ್ಕಾರ ಉಳಿಸಿಕೊಳ್ಳುವ ಸಂಕಲ್ಪ ತೊಟ್ಟು ಮೈತ್ರಿ ಗಟ್ಟಿಗೊಳಿಸಿಕೊಳ್ಳಲು ನಿರ್ಧರಿಸಿದೆ. ಎಲ್ಲ ಶಾಸಕರನ್ನೂ ಹಿಡಿದಿಟ್ಟುಕೊಳ್ಳಲು ಮತ್ತೆ ಕಸರತ್ತು ಮುಂದುವರಿಸಿದೆ.

ಪಕ್ಷೇತರ ಶಾಸಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದೆ. ಆದರೆ, ಪಕ್ಷೇತರ ಶಾಸಕರಾದ ಆರ್.ಶಂಕರ್ ಅವರು ದೆಹಲಿಯಲ್ಲಿ ಸಿದ್ದರಾಮಯ್ಯ ಅವರ ಜತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಇಷ್ಟೆಲ್ಲ ಬೆಳವಣಿಗೆಗಳಾದರೂ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಮಾತ್ರ ನಾವು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಮೈತ್ರಿ ಸರ್ಕಾರದ ಬೆಳವಣಿಗೆಗಳ ಬಗ್ಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin