ರಾಜ್ಯದಲ್ಲಿ ಹೊಲಸು ರಾಜಕೀಯ, ಸಭ್ಯತೆ ಮೀರಿದ ರಾಜಕೀಯ ಟೀಕೆ-ಟಿಪ್ಪಣಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.20- ತತ್ವ ಸಿದ್ಧಾಂತಗಳಿಗೆ ತೀಲಾಂಜಲಿಯಿಟ್ಟ ರಾಜಕೀಯ ನಾಯಕರ ವಾಕ್ಸಮರಗಳು ಜನ ಸಾಮಾನ್ಯರ ಅಸಹನೆಗೆ ಕಾರಣವಾಗಿವೆ. ಅಭಿವೃದ್ಧಿ ಕಾರ್ಯಗಳ ಆಧಾರದ ಮೇಲೆ ಉಪಚುನಾವಣೆ ಅಸಭ್ಯ ಮಾತಿನ ಯುದ್ಧದಲ್ಲಿ ನಡೆಯುತ್ತಿದೆ. ಪಕ್ಷಾತೀತವಾಗಿ ಎಲ್ಲಾ ನಾಯಕರು ತಮ್ಮ ಘನತೆ ಮೀರಿ ಹೇಳಿಕೆಗಳನ್ನು ನೀಡಿ, ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿ ಜನರ ಟೀಕೆಗೆ ಗುರಿಯಾಗುತ್ತಿದ್ದಾರೆ.

ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿವೆ.

ರಾಜ್ಯ ರಾಜಕಾರಣಕ್ಕೆ ಸೀಮಿತವಾಗದೆ ರಾಷ್ಟ್ರೀಯ ನಾಯಕರನ್ನು ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಟೀಕೆಯ ರಬಸಕ್ಕೆ ಎಳೆದು ತಂದಿವೆ. ಕಾಂಗ್ರೆಸ್ ಮೋದಿ ಅವರನ್ನು ಹೆಬ್ಬೆಟ್ ಗಿರಾಕಿ ಎಂದು ಟ್ವೀಟ್‍ನಲ್ಲಿ ಟೀಕಿಸಿದರೆ, ಬಿಜೆಪಿ ರಾಹುಲ್‍ಗಾಂಧಿ ಅವರನ್ನು ಪಪ್ಪು ಎಂದು ಲೇವಡಿ ಮಾಡಿತ್ತು.

ನಳೀನ್ ಕುಮಾರ್ ಕಟೀಲ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ರಾಹುಲ್‍ಗಾಂಧಿಯನ್ನು ಡ್ರಗ್‍ಪೆಡ್ಲರ್ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜಕೀಯ ಎಂದರೆ ಜನ ರೇಜಿಗೀಡಾ ಗುತ್ತಿದ್ದರು, ಈ ಬಾರಿಯ ಟೀಕೆಗಳಿಂದ ಮತ್ತಷ್ಟು ಮುಜುಗರಕ್ಕೆ ಒಳಗಾಗಿದ್ದಾರೆ. ಉಪ ಚುನಾವಣಾ ಕಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಚರ್ಚೆಯಾಗುತ್ತಿಲ್ಲ.

ಬೆಲೆ ಏರಿಕೆ, ಹಣದುಬ್ಬರ, ಆರ್ಥಿಕ ಕುಸಿತಗಳು ಚುನಾವಣಾ ವಿಷಯಗಳಾಗಿಲ್ಲ. ವಿರೋಧ ಪಕ್ಷದ ನಾಯಕನ ಸ್ಥಾನದ ಬಗ್ಗೆಯಂತೂ ಸಭ್ಯತೆ ಮೀರಿದ ವ್ಯಾಖ್ಯಾನಗಳು ನಡೆದವು. ಆರ್‍ಎಸ್‍ಎಸ್ ಬಗ್ಗೆ ಒಂದಿಷ್ಟು ಮೌಲಿಕ ಚರ್ಚೆಗಳು ನಡೆದವಾದರೂ ತಾರ್ಕಿಕ ಅಂತ್ಯ ಕಾಣಲಿಲ್ಲ. ಜೆಡಿಎಸ್-ಬಿಜೆಪಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದರು.

ಪ್ರಧಾನಿ ಅವರ ಕುರಿತು ಕಾಂಗ್ರೆಸ್ ತಾನು ಮಾಡಿದ ಟೀಕೆಗೆ ಕ್ಷಮೆ ಯಾಚಿಸಿತ್ತು. ಬಿಜೆಪಿ ನಾಯಕರು ಕಾಂಗ್ರೆ ಸ್ಸಿಗರ ಬಗ್ಗೆ ಆಡಿರುವ ಮಾತುಗಳಿಗೆ ಯಾಕೆ ವಿಷಾದ ವ್ಯಕ್ತಪಡಿಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ರಾಜಕೀಯ ಏನೇ ಇದ್ದರೂ ಅದು ಸಾಂವಿ ಧಾನಿಕ ಚೌಕಟ್ಟಿನಲ್ಲಿರಬೇಕು ಎಂಬ ನಿಯಮ ಮರೆಯಲಾಗುತ್ತಿದೆ.

ಪರಸ್ಪರ ಆರೋಪ ಪ್ರತ್ಯಾರೋಪಗಳಿಗೆ ಸಂಸದೀಯ ಪದ ಬಳಕೆ ಮಾಡುವ ರೂಢಿ ಸಂಪ್ರದಾಯ ಇತ್ತೀಚೆಗೆ ಮರೆಯಾಗುತ್ತಿದೆ. ಹಿರಿಯ ನಾಯಕರೇ ಹದ್ದು ಮೀರಿದಾಗ ಇನ್ನು ಕೆಳ ಹಂತದ ಕಾರ್ಯಕರ್ತರ ಮಾತುಗಳನ್ನಂತೂ ಕೇಳುವುದೇ ಬೇಡ. ಸಾಮಾಜಿಕ ಜಾಲತಾಣಗಳಲ್ಲಿನ ಕಾಮೆಂಟ್ ಬಾಕ್ಸ್‍ನಲ್ಲಿನ ಅಭಿಪ್ರಾಯಗಳನ್ನು ಸಭ್ಯರು ಓದುವಂತೆಯೇ ಇಲ್ಲ. ಸಾಮಾಜಿಕ ಜಾಲತಾಣದ ವಾದ- ವಿವಾದವಂತೂ ಸಂಪೂರ್ಣ ಕೊಚ್ಚೆ ಗುಂಡಿಯಂತಾಗಿದೆ.

ಯಾವ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ನಿಯಂತ್ರಣ ಮಾಡುತ್ತಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ನಕಲಿ ಖಾತೆಗಳ ಕಾಲಾಳುಗಳಿಂದ ರಾಜಕೀಯದ ಬಗ್ಗೆ ಮೌಲಿಕ ಚರ್ಚೆಯೂ ಸತ್ತು ಹೋಗಿದೆ. ಯಾರಾದರೂ ಪ್ರಜ್ಞಾವಂತರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೆ ನಕಲಿ ಖಾತೆಗಳ ಹಾವಳಿಕೋರರು ಕೆಟ್ಟ ಕೊಳಕು ಭಾಷೆಗಳಲ್ಲಿ ಪ್ರತಿಕ್ರಿಯಿಸಲಾರಂಭಿಸುತ್ತಾರೆ.

ಹೀಗಾಗಿ ರಾಜಕೀಯ ಹಾಗೂ ಸಾಮಾಜಿಕ ಬೆಳವಣಿಗಳ ಬಗ್ಗೆ ಪ್ರಜ್ಞಾವಂತರು ಉಸಿರೆತ್ತದಂತಾಗಿದೆ. ಯಾವ ಪಕ್ಷಗಳು ತಮ್ಮ ಕಾರ್ಯಕರ್ತರನ್ನು ನಿಯಂತ್ರಣ ಮಾಡುವ ಗೋಜಿಗೆ ಹೋಗುತ್ತಿಲ್ಲ. ಈಗ ಹಿರಿಯ ನಾಯಕರೇ ಬಹಿರಂಗವಾಗಿ ಅಸಂಸದೀಯ ಪದಗಳನ್ನು ಬಳಕೆ ಮಾಡಿ ಟೀಕೆಗಳನ್ನು ಮಾಡುತ್ತಿರುವುದರಿಂದ ಕೆಳ ಹಂತಗಳ ಕಾರ್ಯಕರ್ತರು ಮತ್ತಷ್ಟು ಅಸಭ್ಯ ಭಾಷೆಗೆ ಅಂಟಿಕೊಳ್ಳುತ್ತಿದ್ದಾರೆ. ಕ್ರಮೇಣ ರಾಜಕೀಯ ದ್ವೇಷದ ವೇದಿಕೆಯಾಗುತ್ತಿದೆ.

ಸೈದ್ಧಾಂತಿಕ ನೆಲೆಗಟ್ಟುಗಳು ಮೂಲಭೂತವಾದ ಮತ್ತು ಕೋಮುವಾದದ ಜ್ಞಾಲೆಯಾಗುತ್ತಿವೆ. ಇದೇ ಪರಿಸ್ಥಿತಿ ಮುಂದು ವರೆದರೆ ದೇಶಕ್ಕೆ ಮಾದರಿಯಾಗಿದ್ದ ರಾಜಕೀಯ ಪರಂಪರೆ ನಶಿಸಿ ಹೋಗುವುದಷ್ಟೆ ಅಲ್ಲದೆ, ಹಸಿಬಿಸಿ ಅವಘಡಗಳನ್ನು ಸೃಷ್ಟಿಸುವ ಆತಂಕವೂ ಇದೆ.

Facebook Comments