ರಾಜ್ಯದಲ್ಲಿ ಕೊರೋನಾ ದೇಣಿಗೆ ವಿಚಾರದಲ್ಲೂ ‘ರಾಜಕೀಯ’..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.17-ಕೊರೊನಾ ಮಹಾಮಾರಿಗೆ ಎಲ್ಲೆಡೆ ಉಂಟಾಗಿರುವ ಲಾಕ್‍ಡೌನ್‍ನಿಂದಾಗಿ ರಾಜ್ಯದಲ್ಲಿ ಸಂಪನ್ಮೂಲ ಕ್ರೂಢೀಕರಣ ಕುಂಟಿತವಾಗಿ ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದೆ. ಈ ಸಂದರ್ಭದಲ್ಲಿ ಒಟ್ಟಾಗಿ ನಿಲ್ಲಬೇಕಾಗಿದ್ದ ಜನಪ್ರತಿನಿಧಿಗಳು ರಿಲೀಫ್ ಫಂಡ್ (ಪರಿಹಾರ ನಿಧಿಯ) ರಾಜಕೀಯ ಮಾಡುತ್ತಿದ್ದಾರೆ.

ಕೊರೊನಾ ಸಂದರ್ಭದಲ್ಲಿ ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕೃತವಾಗಿಯೇ ಮನವಿ ಮಾಡಿದ್ದರು. ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿಎಂ ಕೇರ್ ಎಂಬ ನಿಧಿಯನ್ನು ಆರಂಭಿಸಿದರು. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿಯವರ ಮನವಿಗೆ ಪ್ರತಿಪಕ್ಷಗಳಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ.

ಕಾಂಗ್ರೆಸ್ ತನ್ನ ಪಕ್ಷದ ಎಲ್ಲಾ ಶಾಸಕರು ಕಾಂಗ್ರೆಸ್ ಪರಿಹಾರ ನಿಧಿಗೆ ತಲಾ ಒಂದು ಲಕ್ಷ ರೂ. ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಇದನ್ನು ಆಧರಿಸಿ ಎಲ್ಲಾ ಶಾಸಕರು ಒಂದೊಂದು ಲಕ್ಷ ರೂ. ದೇಣಿಗೆಯನ್ನು ಪಕ್ಷದ ನಿಧಿಗೆ ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ಸೇರಬೇಕಾಗಿದ್ದ ಈ ಹಣ ಪಕ್ಷದ ಕಚೇರಿಗೆ ಸಲ್ಲಿಕೆಯಾಗಿದೆ. ಜೆಡಿಎಸ್ ಪಾಳಯದಿಂದ ಕೆಲವು ಶಾಸಕರು ವೈಯಕ್ತಿಕವಾಗಿ ದೇಣಿಗೆ ನೀಡಿದ್ದಾರೆಯೇ ಹೊರತು ಸಾಮೂಹಿಕವಾಗಿ ಈ ಕುರಿತು ಸ್ಪಂದನೆ ಸಿಕ್ಕಿಲ್ಲ.

ಇನ್ನು ಕಾಂಗ್ರೆಸ್ ಪಕ್ಷ ತನ್ನ ಶಾಸಕರಿಂದ ಸಂಗ್ರಹಿಸಿದ್ದ ದೇಣಿಗೆಯನ್ನು ಯಾವ ರೀತಿ ಬಳಕೆ ಮಾಡುತ್ತಿದೆ ಎಂಬ ಮಾಹಿತಿ ಪ್ರಕಟಿಸಿಲ್ಲ . ಟಾಸ್ಕ್‍ ಫೋರ್ಸ್, ವಿಷನ್ ಗ್ರೂಪ್‍ಗಳನ್ನು ರಚನೆ ಮಾಡಿಕೊಂಡು ದಿನನಿತ್ಯ ಸಭೆಗಳ ಮೇಲೆ ಸಭೆ ಮಾಡಲಾಗುತ್ತಿದೆ. ಕೆಲವು ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಕ್ಷೇತ್ರದಲ್ಲಿ ರೈತರು ಬೆಳೆದ ಹಣ್ಣು, ತರಕಾರಿಗಳನ್ನು ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ್ದಾರೆ.

ಅದರ ಹೊರತುಪಡಿಸಿ ಪಕ್ಷದಿಂದ ಯಾವೆಲ್ಲಾ ನೆರವುಗಳನ್ನು ನೀಡಲಾಗಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಕಾಂಗ್ರೆಸ್ ಶಾಸಕರ ದೇಣಿಗೆ ಮುಖ್ಯಮಂತ್ರಿ ಪರಿಹಾರ ನಿಧಿಗೂ ತಲುಪಿಲ್ಲ. ಯಾವ ರೀತಿ ಬಳಕೆಯಾಗುತ್ತಿದೆಯೋ ಎಂಬ ಮಾಹಿತಿಯೂ ಇಲ್ಲ. ಆರಂಭದಲ್ಲಿ ಬಿಜೆಪಿ ಸರ್ಕಾರ ತಾನೇ ಎಲ್ಲವನ್ನು ಸರಿಪಡಿಸುವ ಹುಮ್ಮನಸ್ಸಿನಲ್ಲಿಯೇ ಹೆಜ್ಜೆ ಹಾಕಿತ್ತು. ವಿರೋಧ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.

ವಿಧಾನಸಭೆ ನಡೆಯುತ್ತಿದ್ದರೂ ಸರ್ಕಾರ ಕೊರೊನಾ ವಿಷಯದಲ್ಲಿ ವಿಪಕ್ಷದ ನೆರವು ಯಾಚಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ತನ್ನದೇ ದಾರಿಯಲ್ಲಿ ನಡೆದಿದೆ.ಕಾಂಗ್ರೆಸ್ ಶಾಸಕರು ಕೊಟ್ಟ ನೆರವು, ದೇಣಿಗೆಯನ್ನು ಬಳಸಿಕೊಂಡು ಬಿಜೆಪಿ ತನ್ನ ಪ್ರಚಾರ ಹೆಚ್ಚಿಸಿಕೊಳ್ಳಲು ಅವಕಾಶ ಕೊಡುವ ಬದಲಾಗಿ ಪಕ್ಷವೇ ದೇಣಿಗೆ ಸಂಗ್ರಹಿಸಿ ಅದರಲ್ಲಿ ರಚನಾತ್ಮಕ ಕೆಲಸ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.

ರಮೇಶ್‍ಕುಮಾರ್ ನೇತೃತ್ವದ ಸಮಿತಿ ಕಾಂಗ್ರೆಸ್ ಪಕ್ಷ ಸಂಗ್ರಹಿಸಿದ ದೇಣಿಗೆಯನ್ನು ಯಾವ ರೀತಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಕುರಿತಂತೆ ಚರ್ಚೆ ನಡೆಸುತ್ತಿದೆ. ಸಮಿತಿಯ ಶಿಫಾರಸ್ಸಿನ ಮೂಲಕ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿ ತನ್ನ ಆರ್‍ಎಸ್‍ಎಸ್ ಕಾರ್ಯಕರ್ತರಿಗೆ ಮಾತ್ರ ಕೊರೊನಾ ಸಂದರ್ಭದಲ್ಲಿ ಕ್ಷೇತ್ರಕ್ಕಿಳಿದು ಕೆಲಸ ಮಾಡಲು ಆರಂಭದಲ್ಲಿ ಅನುಮತಿ ನೀಡಿತ್ತು. ಈ ರೀತಿಯ ನಿರ್ಧಾರಗಳಿಂದ ಕೆರಳಿರುವ ಕಾಂಗ್ರೆಸ್ ದೇಣಿಗೆ ರಾಜಕಾರಣದ ಮೂಲಕ ತಿರುಗೇಟು ನೀಡುತ್ತಿದೆ.

Facebook Comments

Sri Raghav

Admin