ಪೂರ್ಣಿಮಾ ಶ್ರೀನಿವಾಸ್‍ಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರೆಯೇ ಸಿಎಂ ಯಡಿಯೂರಪ್ಪ..?

ಈ ಸುದ್ದಿಯನ್ನು ಶೇರ್ ಮಾಡಿ

ವರ್ಷ ಪೂರೈಸಿರುವ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಕೊರೊನಾ ಸೋಂಕಿನ ವಿರುದ್ಧ ಹೋರಾಡುವುದೇ ಒಂದು ಸವಾಲಾಗಿದೆ.

ಸೂಕ್ತ ಚಿಕಿತ್ಸೆ ಸಿಗದೆ, ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಕೊರೊನಾ ಸೋಂಕಿತರು ಪರದಾಡುತ್ತ ಸರ್ಕಾರದ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿರುವುದು ಅತ್ಯಂತ ದುರ್ದೈವದ ಸಂಗತಿ.

ಆರೋಗ್ಯ ಸಚಿವರಿಗೆ ಸೋಂಕು ತಗುಲಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ವೈದ್ಯಕೀಯ ಸಚಿವ ಸುಧಾಕರ್ ಅವರು ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂಬ ಹಾರಿಕೆಯ ಉತ್ತರ ನೀಡಿ ಜಾರಿಕೊಳ್ಳುತ್ತಾರೆಯೇ ಹೊರತು ಯಾವುದೇ ಆಸ್ಪತ್ರೆ ವಿರುದ್ಧ ಇದುವರೆಗೂ ಕ್ರಮ ಜರುಗಿಸಿಲ್ಲ.

ಸಚಿವರ ಬೇಜವಬ್ದಾರಿತನ, ಆಂತರಿಕ ಕಚ್ಚಾಟದಿಂದ ಕೊರೊನಾ ವೈರಸ್ ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಯಿತು ಎಂಬ ಮಾತು ವಿರೋಧ ಪಕ್ಷದ ನಾಯಕರಿಂದ ಕೇಳಿ ಬರುತ್ತಿದೆ.

ಯಾವುದೋ ಲಾಬಿಗೆ ಮಣಿದು ಯಾರ್ಯಾರಿಗೋ ಸಚಿವ ಸ್ಥಾನ ನೀಡುವುದನ್ನು ಬಿಟ್ಟು ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳ ಬಗ್ಗೆ ಅರಿವಿರುವವರಿಗೆ ಸ್ಥಾನ ನೀಡಬೇಕೆಂಬ ಮಾತುಗಳು ಕೇಳಿಬರುತ್ತಿವೆ.

ವರ್ಷ ಕಳೆಯುತ್ತಿದ್ದಂತೆ ಮುಖ್ಯಮಂತ್ರಿಗಳು ಸಂಪುಟ ಪುನಾರಚನೆಗೆ ಮುಂದಾಗಿದ್ದಾರೆ. ಕೆಲ ಸಚಿವರ ಕಾರ್ಯವೈಖರಿಯಿಂದ ಅಸಮಾಧಾನಗೊಂಡಿರುವ ಬಿಎಸ್‍ವೈ ಅವರು ಈ ಬಾರಿ ಹೊಸ ಮುಖಗಳಿಗೆ ಸ್ಥಾನ ನೀಡಲು ತೀರ್ಮಾನಿಸಿದ್ದು, ಹೈಕಮಾಂಡ್ ಗ್ರೀನ್‍ಸಿಗ್ನಲ್‍ಗಾಗಿ ಕಾಯುತ್ತಿದ್ದಾರೆ.

ಮೇಲ್ಮನೆ ಸದಸ್ಯರಾಗಿ ಆಯ್ಕೆಯಾಗಿರುವ ಎಚ್.ವಿಶ್ವನಾಥ್, ಸಿ.ಪಿ.ಯೋಗೇಶ್ವರ್, ಎಂಟಿಬಿ ನಾಗರಾಜ್, ಭಾರತಿ ಶೆಟ್ಟಿ ಹಾಗೂ ಹಿರಿಯೂರು ಶಾಸಕಿ ಪೂರ್ಣಿಮಾ ಅವರ ಹೆಸರು ಕೇಳಿಬರುತ್ತಿವೆ.

ಹಿರಿಯ ರಾಜಕಾರಣಿ ದಿ.ಎ.ಕೃಷ್ಣಪ್ಪ ಅವರ ಪುತ್ರಿಯಾಗಿರುವ ಪೂರ್ಣಿಮಾ ಅವರು ತಮ್ಮ ಸಮಾಜ ಸೇವೆಯಿಂದಲೇ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದರು. ಇದೀಗ ಹಿರಿಯೂರು ಕ್ಷೇತ್ರದ ಶಾಸಕಿಯಾಗಿ ಜನಸೇವೆ ಮಾಡುತ್ತಿರುವ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಯಡಿಯೂರಪ್ಪನವರು ಮತ್ತು ಪಕ್ಷದ ಮುಖಂಡರು ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡುವುದರ ಮುಖಾಂತರ ಚುನಾವಣಾ ಪ್ರಚಾರದಲ್ಲಿ ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಅವರ ನಿರೀಕ್ಷೆ ಸುಳ್ಳು ಮಾಡದೆ ಸಂಪುಟ ಪುನಾರಚನೆ ಸಂದರ್ಭದಲ್ಲಿ ಪೂರ್ಣಿಮಾ ಅವರಿಗೆ ಸ್ಥಾನ ನೀಡಬೇಕು ಎಂದು ಯಾದವ ಸಮಾಜದ ಮುಖಂಡರು ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕ್ಷೇತ್ರದಿಂದ ಪ್ರಥಮ ಬಾರಿಗೆ ಶಾಸಕಿಯಾಗಿ ಆರಿಸಿ ಬಂದ ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ ನೀಡಿದ್ದು ಹಿರಿಯೂರಿನ ಕ್ಷೇತ್ರದ ಜನತೆಗೆ ತೀವ್ರ ಬೇಸರ ಉಂಟು ಮಾಡಿತು.

ಸಚಿವೆ ಶಶಿಕಲಾ ಜೊಲ್ಲೆಯವರ ಕೌಟುಂಬಿಕ ಹಿನ್ನೆಲೆ ಹೇಳುವುದಾದರೆ ಅವರ ಪತಿ ಅಣ್ಣ ಸಾಹೇಬ್ ಜೊಲ್ಲೆಚಿಕ್ಕೋಡಿ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯರು. ಪತಿ ಎಂ.ಪಿ. ಪತ್ನಿ ಮಿನಿಸ್ಟರ್.

ಒಂದೇ ಮನೆಯಲ್ಲಿ 2 ಪವರ್ ಸೆಂಟರ್ ಕೊಡುವುದಾದರೆ ಇದೆಂಥ ಬಿಜೆಪಿ ಸಿದ್ಧಾಂತ..? ಇದೇನಾ ಬಿಜೆಪಿಯ ನೈತಿಕತೆ…? ಎಂಬುದು ಹಿರಿಯೂರು ಕ್ಷೇತ್ರದ ಪ್ರತಿಯೊಬ್ಬ ಮತದಾರನ ಪ್ರಶ್ನೆ. ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಸಿದ್ಧಾಂತದ ಅಡಿಯಲ್ಲಿ ಜನಸೇವೆ ಮಾಡುತ್ತಿರುವ ನಮ್ಮ ಹೆಮ್ಮೆಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಕೊಡಲೆಬೇಕೆಂಬುದು ಪೂರ್ಣಿಮಾ ರವರ ಯಾದವ ಸಮಾಜದ ಬಂಧುಗಳ ಕೂಗು.

ಜತೆಗೆ ಜನರ ಕೈಗೆ ಸಿಗದೇ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸ್ಪಂದಿಸದೆ ಸಚಿವೆ ಶಶಿಕಲಾ ಜೊಲ್ಲೆಯವರು ಕ್ಷೇತ್ರವನ್ನು ಮರೆತಿದ್ದಾರೆ ಎಂಬುದು ಜನರ ಆರೋಪ. ಜತೆಗೆ ಇಲಾಖೆಯಲ್ಲಿನ ಟೆಂಡರ್ ಗಳನ್ನು ಕಮೀಷನ್ ಹಣದ ಆಸೆಗೆ ಕಾನೂನು ಬಾಹಿರವಾಗಿ ಹೊರರಾಜ್ಯದ ಕಂಪನಿಗಳಿಗೆ ನೀಡುತ್ತಿದ್ದಾರೆ ಎಂಬ ಆರೋಪವು ಸಹ ಅಕಾರಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಅದೇನೆ ಇರಲಿ ಪೂರ್ಣಿಮಾ ಶ್ರೀನಿವಾಸ್ ಅವರು ಯಾದವ ಸಮಾಜದ ಭರವಸೆಯ ನಾಯಕಿ,ತಂದೆ ಕೃಷ್ಣಪ್ಪ ರಂತೆ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ಭವಿಷ್ಯದ ಪ್ರಬಲ ಲೀಡರ್,ಒಳ್ಳೆಯ ವಾಕ್ ಚಾತುರ್ಯ, ಎಂತಹ ಸಮಯದಲ್ಲೂ ಪಕ್ಷವನ್ನು ಸಮರ್ಥಿಸಿಕೊಳ್ಳುವ ಚಾಣಾಕ್ಷೆ.

ಇದೆಲ್ಲದಕ್ಕಿಂತ ಮುಖ್ಯವಾಗಿ ಬಡವರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುವ ಮಾತೃ ಹೃದಯಿ. ಇವೆಲ್ಲವು ಪೂರ್ಣಿಮಾರವರಿಗೆ ಸಚಿವ ಸಂಪುಟದಲ್ಲಿ ಈ ಬಾರಿ ಅವಕಾಶ ಕೊಡಲೇಬೇಕೆಂಬ ಅಭಿಯಾನ ಶುರುವಾಗಿದೆ.
ಈಗಲಾದರೂ ಪೂರ್ಣಿಮಾ ಅವರಿಗೆ ಸಚಿವ ಸ್ಥಾನ ನೀಡುವುದರ ಮುಖಾಂತರ ಚುನಾವಣಾ ಪ್ರಚಾರದಲ್ಲಿ ಕೊಟ್ಟ ಮಾತನ್ನು ಉಳಿಸಿಕೊಳ್ಳುವರೋ ಎಂಬುದು ಅಭಿಯಾನ ಶುರು ಮಾಡಿರುವ ಹಿರಿಯೂರು ಕ್ಷೇತ್ರದ ಮತದಾರರ ಪ್ರಶ್ನೆ..? ಇದೆಲ್ಲದಕ್ಕೂ ಉತ್ತರ… ಸಂಪುಟ ಪುನಾರಚನೆ..! ಅಲ್ಲಿಯವರೆಗೂ ನಾವು-ನೀವು ಕಾದು ನೋಡೋಣ..!

Facebook Comments

Sri Raghav

Admin