ಸುಕ್ಕಾ ಸೂರಿಯ ‘ಪಾಪ್ ಕಾರ್ನ್ ಮಂಕಿ ಟೈಗರ್’ ಈ ವಾರ ಥಿಯೇಟರ್‌ಗೆ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

ಮೇಲೆ ಮತ್ತೊಮ್ಮೆ ಸುಕ್ಕಾ ಸ್ಟೋರಿ ಅಬ್ಬರಿಸಲು ಸನ್ನದ್ಧವಾಗಿದೆ. ನಿರ್ದೇಶಕ ಸೂರಿ ಈ ಹಿಂದೆ ದುನಿಯಾ, ಕೆಂಡ ಸಂಪಿಗೆ ಮುಂತಾದ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಇದೀಗ ಡಾಲಿ ಧನಂಜಯ್ ಅವರನ್ನು ಹಾಕಿಕೊಂಡು ಪಾಪ್ ಕಾರ್ನ್ ಮಂಕಿ ಟೈಗರ್ ಕಥೆ ಹೇಳಲು ಹೊರಟಿದ್ದಾರೆ.

ನಿರ್ದೇಶಕ ಸುಕ್ಕಾ ಸೂರಿ ಮತ್ತು ಡಾಲಿ ಎಂದೇ ಖ್ಯಾತಿ ಗಳಿಸಿರುವ ನಟ ಧನಂಜಯ್ ಕಾಂಬಿನೇಷನ್‍ನ ಬಹುನಿರೀಕ್ಷೆಯ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಇದೇ ವಾರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಈ ಚಿತ್ರದ ಟೀಸರ್ ಹಾಗೂ ಟ್ರೇಲರ್ ಮೇಲೆ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಅಭಿಮಾನಿಗಳ ನಿರೀಕ್ಷೆಗೂ ಮೀರಿದೆ ಧನಂಜಯ್ ಮಂಕಿ ಟೈಗರ್ ಅವತಾರ. ಟಗರು ಡಾಲಿಗಿಂತ ಭಯಾನಕವಾಗಿದೆ ಈ ಪಾಪ್ ಕಾರ್ನ್ ಮಂಕಿ ಟೈಗರ್. ಈಗಾಗಲೇ ವಿಭಿನ್ನ ಲುಕ್‍ನಲ್ಲಿ ಕಾಣಿಸಿಕೊಂಡ ಡಾಲಿ ಧನಂಜಯ್ ಅವರ ಈ ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಕೂಡ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಹಾಡುಗಳು ಮತ್ತು ಟೀಸರ್‍ಗೆ ಅಭಿಮಾನಿಗಳಿಂದ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ.

ಅಮೃತ ಅಯ್ಯಂಗಾರ್, ನಿವೇದಿತಾ ಹಾಗೂ ಸಪ್ತಮಿ ಈ ಸಿನಿಮಾದ ನಾಯಕಿಯರಾಗಿದ್ದಾರೆ. ಚರಣ್ ರಾಜ್ ಅವರ ಸಂಗೀತ ನೀಡಿದ್ದಾರೆ. ದುನಿಯಾ ಸೂರಿ ನಿರ್ದೇಶನದ 10ನೇ ಸಿನಿಮಾ ಇದಾಗಿದೆ. ದೇವಿ ಹಾಗೂ ಸೀನಾ ಎಂಬ ಎರಡು ಪಾತ್ರಗಳ ಸುತ್ತ ಸುತ್ತುವ ಕಥೆ ಇದು. ಟಗರು ಚಿತ್ರದ ನಂತರ ಸೂರಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಹಾಗಾಗಿ ಈ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಸುಧೀರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸ್ಟುಡಿಯೋ 18 ಮೂಲಕ ಹೊರಬರುತ್ತಿರುವ ಈ ಚಿತ್ರಕ್ಕೆ ದೀಪು ಎಸ್.ಕುಮಾರ್ ಸಂಕಲನವಿದೆ. ಜಾಲಿ ಬಾಸ್ಟನ್ ಸಾಹಸ ನಿರ್ದೇಶನ ಹಾಗೂ ಮಲ್ಲ ಅವರ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಅಮೃತ್‍ಭಾರ್ಗವ್ ಅವರ ಸಹನಿರ್ದೇಶನವಿದೆ. ಇನ್ನು ಈ ಚಿತ್ರದಲ್ಲಿ ಸುಧಿ, ನವೀನ್, ಮೋನಿಷ ನಾಡ್‍ಗಿರ್, ಪೂರ್ಣಚಂದ್ರ ಮುಂತಾದವರಿದ್ದಾರೆ.

ಬಹಳಷ್ಟು ರೌಡಿಸಂ ಕಥಾನಕ ಚಿತ್ರಗಳು ಬಂದು ಹೋಗಿವೆ. ಆದರೆ, ಪ್ರತಿಯೊಬ್ಬ ನಿರ್ದೇಶಕನೂ ತನ್ನದೇ ಆದ ದೃಷ್ಟಿಕೋನದೊಂದಿಗೆ ಭೂಗತ ಜಗತ್ತಿನ ಅನಾವರಣ ಮಾಡಲು ಸಿದ್ಧನಾಗಿರುತ್ತಾನೆ. ಆ ನಿಟ್ಟಿನಲ್ಲಿ ದುನಿಯಾ ಸೂರಿ ಟಗರು ನಂತರ ಮತ್ತೊಮ್ಮೆ ಮಚ್ಚು, ಲಾಂಗಿನ ಸದ್ದನ್ನು ಝಳಪಿಸಲು ಸಿದ್ಧರಾಗಿದ್ದಾರೆ. ಈಗಾಗಲೇ ಮಂಕಿಟೈಗರ್ ಶೀರ್ಷಿಕೆನೇ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದು ಪಡ್ಡೆ ಹೈಕಳು ಸೂರಿಯ ಕಮಾಲ್ ಯಾವ ರೀತಿ ಇರುತ್ತದೆ ಎಂದು ನೋಡಲು ಸನ್ನದ್ಧರಾಗಿದ್ದಾರೆ.

ಚಿತ್ರತಂಡವು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದು, ಈ ಚಿತ್ರದ ಮೂಲಕ ನಾಯಕ ಧನಂಜಯ್‍ಗೆ ಉತ್ತಮ ಬ್ರೇಕ್ ಸಿಗುತ್ತದೆ ಎಂಬ ಮಾತುಗಳು ಗಾಂಧೀನಗರದಲ್ಲಿ ಕೇಳಿಬರುತ್ತಿದೆ. ಒಟ್ಟಾರೆ, ಎಲ್ಲರ ಗಮನ ಈಗ ಮಂಕಿ ಟೈಗರ್ ಮೇಲಿದ್ದು ಸಿನಿಪ್ರಿಯರು ಈ ಚಿತ್ರವನ್ನು ಪರದೆ ಮೇಲೆ ನೋಡಿ ಯಾವ ರೀತಿ, ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Comments

Sri Raghav

Admin