`ಬೇಷರತ್’ ಪ್ರೀತಿಯ ಸಂದೇಶ ಸಾರಿದ ಪೋಪ್

ಈ ಸುದ್ದಿಯನ್ನು ಶೇರ್ ಮಾಡಿ

ವ್ಯಾಟಿಕನ್‍ಸಿಟಿ, ಡಿ.25-ಶಾಂತಿ, ಸಹನೆ ಮತ್ತು ಸಂಯಮದ ಮೂಲ ಮಂತ್ರ ಸಾರಿರುವ ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮಗುರು ಪೋಪ್ ಫ್ರಾನ್ಸಿಸ್ ಬೇಷರತ್ ಪ್ರೀತಿಯ ತತ್ವ ಪಾಲಿಸುವಂತೆ ಜಗತ್ತಿನ ಕ್ರೈಸ್ತರಿಗೆ ಉಪದೇಶಿಸಿದ್ದಾರೆ. ಶಾಂತಿದೂತ ಯೇಸು ಕ್ರಿಸ್ತ ಜನ್ಮಜಯಂತಿ ಪ್ರಯುಕ್ತ ನೆನ್ನೆ ಮಧ್ಯರಾತ್ರಿ ರೋಮ್‍ನ ವ್ಯಾಟಿಕನ್ ಸಿಟಿಯಲ್ಲಿ ಮಿಡ್‍ನೈಟ್ ಮಾಸ್ ಪ್ರಾರ್ಥನೆ ನಂತರ ಅವರು ವಿಶ್ವದ 1.3 ಶತಕೋಟಿ ಕ್ರೈಸ್ತರಿಗೆ ಕ್ರಿಸ್‍ಮಸ್ ಸಂದೇಶ ಸಾರಿದರು.

ನಿಮ್ಮ ಮನಸ್ಸಿನಲ್ಲಿ ದುಷ್ಟ ಆಲೋಚನೆಗಳಿದ್ದರೂ ಮತ್ತು ನೀವು ಪದೇ ಪದೇ ತಪ್ಪುಗಳನ್ನು ಮಾಡುತ್ತಿದ್ದರೂ ದೇವರು ನಿಮ್ಮನ್ನು ಕ್ಷಮಿಸಿ ಕರುಣೆ ಮತ್ತು ಪ್ರೀತಿಯನ್ನು ಮುಂದುವರಸುತ್ತಿದ್ದಾನೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದ ಬೇಷರತ್ ಪ್ರೀತಿಯನ್ನು ಜಗತ್ತಿನ ಎಲ್ಲರೂ ಪಾಲಿಸಿದರೆ ಈ ಸಮಾಜದಲ್ಲಿ , ಜಗತ್ತಿನಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಪೋಪ್ ಸಾರಿದರು.

ದೇಶದ ವಿವಿಧೆಡೆ ಹೆಚ್ಚುತ್ತಿರುವ ವ್ಯಾಪಕ ಹಿಂಸಾಚಾರ ಮತ್ತು ಯುದ್ಧದಂತಹ ವಾತಾವರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪೋಪ್ ಅನೇಕ ದೇಶಗಳು ಆತಂಕಕಾರಿ ಮಟ್ಟದಲ್ಲಿ ಅಣ್ವಸ್ತ್ರ ಸೇರಿದಂತೆ ಮಾರಕಾಸ್ತ್ರಗಳ ವ್ಯಾಪಾರ ವಹಿವಾಟು ಹೆಚ್ಚಿಸುತ್ತಿವೆ. ಇದರ ವಿರುದ್ಧ ಜಗತ್ತಿನಲ್ಲಿ ಆಂದೋಲನ ನಡೆಯಬೇಕಾಗಿದೆ ಎಂದು ಪೋಪ್ ಕರೆ ನೀಡಿದರು.

ಬಳಿಕ ಇಂದು ಮಧ್ಯಾಹ್ನ ವ್ಯಾಟಿಕನ್ ಸಿಟಿಯ ಸೆಂಟ್ ಪೀಟರ್ಸ್ ಸ್ಕ್ವೇರ್‍ನಲ್ಲಿ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಶಾಂತಿ ಸಂದೇಶ ಬೋಧಿಸಿದ ಅವರು, ಮನಸ್ಸು ಮನಸ್ಸುಗಳು ಬೆರೆಯುವಂತಹ ಸಂಪರ್ಕ ಸೇತುವೆಯಂತೆ ಕ್ರೈಸ್ತರು ಕಾರ್ಯನಿರ್ವಹಿಸಬೇಕು ಎಂದು ಸಲಹೆ ಮಾಡಿದರು.

Facebook Comments