ಉಗ್ರರಿಂದ ನರಮೇಧ : ಭಯಭೀತ ಜನತೆಗೆ ವಿಶ್ವಸಂಸ್ಥೆ, ಪೋಪ್ ನೈತಿಕ ಸ್ಥೈರ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಔಗಡೌಗು, ಡಿ.26-ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೋದಲ್ಲಿ ಜಿಹಾದಿಗಳು(ಇಸ್ಲಾಮಿಕ್ ಸ್ಟೇಟ್ ಉಗ್ರರು) ನಡೆಸಿದ ಹತ್ಯಾಕಾಂಡದಲ್ಲಿ ಸಾವು-ನೋವಿನಿಂದ ಹೆದರಿ ಕಂಗಲಾಗಿರುವ ದೇಶದ ಜನರಿಗೆ ವಿಶ್ವಸಂಸ್ಥೆ ಮತ್ತು ಪೋಪ್ ಫ್ರಾನ್ಸಿಸ್ ನೈತಿಕ ಸ್ಥೈರ್ಯ ನೀಡಿದ್ದಾರೆ.

ಕ್ರಿಸ್ಮಸ್ ದಿನದಂದೇ ಭಾರೀ ಸಂಖ್ಯೆಯ ಶಸ್ತ್ರಸಜ್ಜಿತ ಭಯೋತ್ಪಾದಕರು ಏಕ ಕಾಲದಲ್ಲಿ ನಡೆಸಿದ ಎರಡು ದಾಳಿಗಳಲ್ಲಿ 31 ಮಹಿಳೆಯರೂ ಸೇರಿದಂತೆ 35 ನಾಗರಿಕರು ಮತ್ತು ಏಳು ಯೋಧರು ಹತರಾದರು. ಭಯೋತ್ಪಾದಕರ ಭೀಕರ ದಾಳಿಯಿಂದ ಬರ್ಕಿನಾ ಫಾಸೋ ಜನರಲ್ಲಿ ಕ್ರಿಸ್ಮಸ್ ಸಡಗರ ಕಮರಿ ಹೋಯಿತು.

ಉಗ್ರರ ನರಮೇಧ ಕೃತ್ಯವನ್ನು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಮತ್ತು ಕ್ಯಾಥೋಲಿಕ್ ಕ್ರೈಸ್ತರ ಪರಮೋಚ್ಚ ಧರ್ಮ ಗುರು ಪೋಪ್ ಫ್ರಾನ್ಸಿಸ್ ಖಂಡಿಸಿದ್ದಾರೆ. ಹತರಾದ ನಾಗರಿಕರು ಮತ್ತು ಯೋಧರ ಆತ್ಮಕ್ಕೆ ಶಾಂತಿ ಕೋರಿರುವ ಗುಟೆರಸ್ ಮತ್ತು ಪೋಪ್, ತಮ್ಮವರನ್ನು ಕಳೆದುಕೊಂಡವರಿಗೆ ಸಾಂತ್ವನ ನೀಡಿ ನೈತಿಕ ಸ್ಥೈರ್ಯ ತುಂಬಿದ್ದಾರೆ.

ಸೌಮ್ ಪ್ರಾಂತ್ಯದ ಅರ್ಬಿಂಡಾ ನಗರದ ನಾಗರಿಕ ಪ್ರದೇಶಗಳು ಮತ್ತು ಸೇನಾ ಶಿಬಿರಗಳನ್ನು ಗುರಿಯಾಗಿಟ್ಟುಕೊಂಡು ಉಗ್ರರು ನಡೆಸಿದ ಡಬಲ್ ಅಟ್ಯಾಕ್‍ನಲ್ಲಿ 35 ನಾಗರಿಕರು ಮತ್ತು ಏಳು ಯೋಧರು ಹತರಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ನಂತರ ನಡೆದ ಸೇನಾ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ಜಿಹಾದಿಗಳನ್ನು ಕೊಲ್ಲಲಾಗಿದೆ. ಈ ಹಿಂಸಾಚಾರದಲ್ಲಿ ಗಾಯಗೊಂಡಿರುವ ಅನೇಕರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

Facebook Comments