ಮುನಿಸಿಕೊಂಡ ಸಚಿವರು : ಮತ್ತೆ ಖಾತೆ ಬದಲಾವಣೆಗೆ ಸಿಎಂ ಸಮ್ಮತಿ..!
ಬೆಂಗಳೂರು,ಜ.22- ತಮಗೆ ನಿರೀಕ್ಷಿಸಿದ ಖಾತೆ ಸಿಗದ ಕಾರಣ ಕೆಲವು ಸಚಿವರು ಮುನಿಸಿಕೊಂಡಿರುವ ಹಿನ್ನೆಲೆಯಲ್ಲಿ ನಾಲ್ವರ ಖಾತೆಗಳನ್ನು ಬದಲಾವಣೆ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಸಮ್ಮತಿಸಿದ್ದಾರೆ. ಸಚಿವರಾದ ಕೆ.ಗೋಪಾಲಯ್ಯ, ಎಂಟಿಬಿ ನಾಗರಾಜ್, ಆರ್.ಶಂಕರ್, ಜೆ.ಸಿ.ಮಾಧುಸ್ವಾಮಿ ಹಾಗೂ ನಾರಾಯಣಗೌಡ ಅವರ ಖಾತೆ ಯಾವುದೇ ಸಂದರ್ಭದಲ್ಲಾದರೂ ಬದಲಾಗುವ ಸಾಧ್ಯತೆಯಿದೆ.
ಒಂದು ಮೂಲದ ಪ್ರಕಾರ ಈಗಾಗಲೇ ಖಾತೆಗಳ ಪರಿಷ್ಕøತ ಪಟ್ಟಿಯನ್ನು ಸಿಎಂ ಯಡಿಯೂರಪ್ಪನವರು ರಾಜಭವನಕ್ಕೆ ಕಳುಹಿಸಿಕೊಟ್ಟಿದ್ದು, ರಾಜ್ಯಪಾಲ ವಿ.ಆರ್.ವಾಲಾ ಅವರ ಅಂಕಿತ ಬಾಕಿ ಉಳಿದಿದೆ. ಸಿಎಂ ಕಚೇರಿ ಮಾಹಿತಿ ಪ್ರಕಾರ ಕೆ.ಗೋಪಾಲಯ್ಯನವರಿಗೆ ಅಬಕಾರಿ, ಎಂಟಿಬಿ ನಾಗರಾಜ್ಗೆ ಪೌರಾಡಳಿತ, ಆರ್.ಶಂಕರ್ಗೆ ತೋಟಗಾರಿಕೆ ಮತ್ತು ರೇಷ್ಮೆ, ಜೆ.ಸಿ.ಮಾಧುಸ್ವಾಮಿಗೆ ಹಿಂದೆಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರ ಮತ್ತು ಕೆ.ನಾರಾಯಣಗೌಡಗೆ ಹೆಚ್ಚುವರಿಯಾಗಿ ಅಂಕಿಸಂಖ್ಯೆ ಯೋಜನೆಗಳ ಅನುಷ್ಠಾನ ಖಾತೆಯನ್ನು ನೀಡುವ ಸಾಧ್ಯತೆಯಿದೆ.
ಉಳಿದಂತೆ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದಿರುವುದಕ್ಕೆ ಮುನಿಸಿಕೊಂಡಿರುವ ಡಾ.ಕೆ.ಸುಧಾಕರ್ ಅವರಿಗೆ ಒಂದೇ ಖಾತೆ ಸೀಮಿತವಾಗಲಿದೆ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿ ಮುಂದುವರೆಯಲಿದ್ದು, ಅಸಮಾಧಾನ, ಮುನಿಸಿಗೆ ಸಿಎಂ ಆಗಲಿ ಇಲ್ಲವೇ ಇತರೆ ಸಚಿವರು ಸೊಪ್ಪು ಹಾಕಿಲ್ಲ. ನಿನ್ನೆಯಷ್ಟೇ ಕೆಲವು ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಕ್ಕೆ ಮುನಿಸಿಕೊಂಡು ಸಚಿವ ಸಂಪುಟಕ್ಕೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಖಾತೆ ಬದಲಾವಣೆ ನಂತರ ತಲೆದೋರಿರುವ ಅಸಮಾಧಾನಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಕೆಲವು ಸಚಿವರ ಒತ್ತಡಕ್ಕೆ ಮಣಿದು ಖಾತೆ ಬದಲಾವಣೆ ಮಾಡಲು ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಖಾತೆ ಹಂಚಿಕೆ ಬದಲಾವಣೆ ನಂತರ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಪ್ತ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಕಳೆದ ರಾತ್ರಿಅಧಿಕೃತ ನಿವಾಸ ಕಾವೇರಿಯಲ್ಲಿ ಸಂಜೆ 7.30 ರಿಂದ ರಾತ್ರಿ 11 ಗಂಟೆಯವರೆಗೆ ಬಸವರಾಜ ಬೊಮ್ಮಾಯಿ, ಆರ್. ಅಶೋಕ್ ಮತ್ತು ಎಸ್. ಟಿ. ಸೋಮಶೇಖರ್ ಜೊತೆ ಸಮಾಲೋಚನೆ ನಡೆಸಿದ್ದರು.
ಸಂಧಾನಸಭೆ ನಂತರವೂ ಮುನಿಸಿಕೊಂಡು ಸಚಿವ ಸಂಪುಟ ಸಭೆಯಿಂದ ಎಂಟಿಬಿ ನಾಗರಾಜ್, ಗೋಪಾಲಯ್ಯ, ಡಾ.ಸುಧಾಕರ್ ದೂರ ಉಳಿದ ಕಾರಣದಿಂದ ಸಿಎಂ ಮಹತ್ವದ ಸಭೆ ನಡೆಸಿದ್ದರು. ಆಪ್ತ ಸಚಿವರ ಜೊತೆಗಿನ ಸಮಾಲೋಚನೆ ನಂತರ ಸಚಿವರ ಖಾತೆ ಬದಲಾವಣೆಗೆ ಸಿಎಂ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟಗೊಳ್ಳುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.