ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಲು ಶಿಕ್ಷಣ ಸಚಿವರಿಗೆ ಮೇಯರ್ ಪತ್ರ
ಬೆಂಗಳೂರು, ಜೂ.16- ನಗರದಲ್ಲಿ ಕಂಟೈನ್ಮೆಂಟ್ ಝೋನ್ಗಳು ಹೆಚ್ಚಳವಾಗುತ್ತಿರುವು ದರಿಂದ ಯಾವುದೇ ಕಾರಣಕ್ಕೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬಾರದು ಎಂದು ಪೋಷಕರು ಪಟ್ಟು ಹಿಡಿದಿದ್ದು, ಈ ಕುರಿತಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆಯಲು ಮೇಯರ್ ಗೌತಮ್ಕುಮಾರ್ ತೀರ್ಮಾನಿಸಿದ್ದಾರೆ.
198 ವಾರ್ಡ್ಗಳ ಪೈಕಿ ಈಗಾಗಲೇ 192 ಕಂಟೈನ್ಮೆಂಟ್ ಝೋನ್ಗಳಿದ್ದು, ಪರೀಕ್ಷೆ ಆರಂಭ ವಾಗುವ ಜೂ.25ರ ವೇಳೆಗೆ ಕಂಟೈನ್ಮೆಂಟ್ ಝೋನ್ಗಳು ಹೆಚ್ಚಳವಾಗುವ ಸಾಧ್ಯತೆ ಇರುವುದ ರಿಂದ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸಬಾರದು. ಒಂದು ವೇಳೆ ನಡೆಸಿದರೂ ನಮ್ಮ ಮಕ್ಕಳನ್ನು ಕಳುಹಿಸುವುದಿಲ್ಲ ಎಂದು ಪೋಷಕರು ಮೇಯರ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರ ಮನವಿ ಮೇರೆಗೆ ಕಂಟೈನ್ಮೆಂಟ್ ಝೋನ್ ಹೆಚ್ಚಳವಾಗಿರುವ ಬೆಂಗಳೂರಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಬಾರದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆಯಲು ತೀರ್ಮಾನಿಸಿದ್ದೇನೆ ಎಂದು ಮೇಯರ್ ಗೌತಮ್ಕುಮಾರ್ ತಿಳಿಸಿದ್ದಾರೆ.
ಕಂಟೈನ್ಮೆಂಟ್ ಝೋನ್ಗಳಲ್ಲೇ ಪರೀಕ್ಷಾ ಕೇಂದ್ರಗಳಿದ್ದರೆ ನಮ್ಮ ಮಕ್ಕಳನ್ನು ಅಲ್ಲಿಗೆ ಕಳುಹಿಸುವುದು ಹೇಗೆ, ನಾವಂತೂ ನಮ್ಮ ಮಕ್ಕಳನ್ನು ಪಿಯುಸಿ ಮತ್ತು ಎಸ್ಎಸ್ಎಲ್ಸಿ ಪರೀಕ್ಷೆಗೆ ಕಳುಹಿಸುವುದಿಲ್ಲ ಎಂದು ನೂರಾರು ಪೋಷಕರು ನನಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನಾನು ಆ ವಿಚಾರವನ್ನು ಶಿಕ್ಷಣ ಸಚಿವರ ಗಮನಕ್ಕೆ ತರುವ ಉದ್ದೇಶದಿಂದ ಪತ್ರ ಬರೆಯುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.