ಐದು ವಿದ್ಯುತ್ ಪೂರೈಕೆ ಕಂಪನಿಗಳಿಗೆ 2500 ಕೋಟಿ ಬಡ್ಡಿ ರಹಿತ ಸಾಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.9- ಬೇರೆ ಬೇರೆ ಭಾಗಗಳಿಂದ ವಿದ್ಯುತ್ ಖರೀದಿ ಮಾಡಲು ಐದು ವಿದ್ಯುತ್ ಪೂರೈಕೆ ಮಾಡುವ ಕಂಪನಿಗಳಿಗೆ 2500 ಕೋಟಿ ಬಡ್ಡಿ ರಹಿತ ಸಾಲ ನೀಡಲು ಸಚಿವ ಸಂಪುಟ ಸಭೆ ಮಹತ್ವದ ತೀರ್ಮಾನ ಕೈಗೊಂಡಿದೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಬೆಸ್ಕಾಂ, ಮೆಸ್ಕಾಂ,ಚೆಸ್ಕಾಂ, ಎಸ್ಕಾಂ ಹಾಗೂ ಜೆಸ್ಕಾಂ ವಿದ್ಯುತ್ ಪೂರೈಕೆ ಮಾಡುವ ಕಂಪನಿಗೆ ಎರಡೂವರೆ ಸಾವಿರ ಕೋಟಿ ಬಡ್ಡಿ ರಹಿತ ಸಾಲ ಒದಗಿಸಲು ಸಭೆ ಒಪ್ಪಿಗೆ ಸೂಚಿಸಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ವಿದ್ಯುತ್ ಕಂಪನಿಗಳು ಹಿಂದೆ ಬೇರೆ ಬೇರೆ ಭಾಗಗಳಲ್ಲಿ ವಿದ್ಯುತ್ ಖರೀದಿ ಮಾಡಿದ್ದರಿಂದ ನಷ್ಟ ಅನುಭವಿಸಿದ್ದವು. ಇದನ್ನು ಸರಿದೂಗಿಸಲು ಆರ್ಥಿಕ ನೆರವು ನೀಡುತ್ತಿದ್ದೇವೆ. ಉಳಿಯುವ ಹಣವನ್ನು ಬೇರೆ ಭಾಗಗಳಿಂದ ಖರೀದಿಸಬಹುದೆಂದು ತಿಳಿಸಿದರು.

ಈವರೆಗೂ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕ ವಿದ್ಯುತ್ ಕಂಪನಿ(ಕವಿಕ) ಇನ್ನು ಮುಂದೆ ಇಂಧನ ಇಲಾಖೆಯಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ.  ರಾಜ್ಯದ ಪ್ರಾಥಮಿಕ ಮತ್ತು ಆರೋಗ್ಯ ಕೇಂದ್ರಗಳಿಗೆ ತುರ್ತಾಗಿ ವೈದ್ಯಕೀಯ ಮತ್ತು ಪೀಠೋಪಕರಣ ಖರೀದಿಸಲು 89 ಕೋಟಿ ಅನುದಾನ ನೀಡಲು ಸಂಪುಟ ಸಭೆ ಒಪ್ಪಿಗೆ ಕೊಟ್ಟಿದೆ.

ತುರ್ತಾಗಿ ಉಪಕರಣ ಮತ್ತು ಪೀಠೋಪಕರಣ ಅಗತ್ಯವಿದೆ ಎಂಬುದನ್ನು ಮನಗಂಡು ಅನುದಾನ ನೀಡಲು ಸಭೆ ಒಪ್ಪಿಗೆ ಕೊಟ್ಟಿದೆ ಎಂದು ಹೇಳಿದರು.  ಕೋವಿಡ್ ನಿಯಂತ್ರಣಕ್ಕಾಗಿ ವೈದ್ಯಕೀಯ ಗ್ಯಾಸ್‍ಪೈಪ್‍ಲೈನ್ ಹಾಗೂ ಹಾಸಿಗೆ ಹೆಚ್ಚಿಸಿಕೊಳ್ಳಲು 207 ಕೋಟಿ ಮಂಜೂರು ಮಾಡಲಾಗಿದೆ. ವಿಜಯಪುರದಲ್ಲಿ 220 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ಸಭೆ ತೀರ್ಮಾನಿಸಿದೆ.

ವಿಮಾನ ನಿಲ್ದಾಣದ ಕಾಮಗಾರಿಯನ್ನು ಪ್ರಾರಂಭಿಸಲು ಮೊದಲ ಹಂತವಾಗಿ 95 ಕೋಟಿ ಬಿಡುಗಡೆ ಮಾಡಲು ಒಪ್ಪಿಗೆ ಕೊಡಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಈವರೆಗೂ ವಸೂಲಿ ಮಾಡುತ್ತಿದ್ದ ಶೇ.1.5 ಸೆಸ್‍ನ್ನು ಕಡಿತಗೊಳಿಸಿ ಇನ್ನು ಮುಂದೆ ಶೇ.1ರಷ್ಟು ಸೆಸ್ ಇಳಿಕೆ ಮಾಡಲಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಲಕ್ಷ್ಮಿ ನರಸಯ್ಯ ನಿವೃತ್ತಿಯಾಗುತ್ತಿದ್ದು, ತೆರವಾಗಲಿರುವ ಈ ಸ್ಥಾನಕ್ಕೆ ನೇಮಕ ಮಾಡುವ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ನೀಡಲಾಗಿದೆ.  ರಾಜ್ಯದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಷಿಸಲು ಅಮೆರಿಕದ ಬೋಸ್ಟನ್ ಕನ್ಸಲ್ಟಿಂಗ್ ಬಹುರಾಷ್ಟ್ರೀಯ ಕಂಪನಿಗೆ ಜವಾಬ್ದಾರಿಯನ್ನು ನೀಡಲಾಗಿದೆ.

ಈ ಕಂಪನಿ ಕರ್ನಾಟಕದಲ್ಲಿ ಎಲ್ಲೆಲ್ಲಿ ಬಂಡವಾಳ ಹೂಡಿಕೆ ಮಾಡಲು ಅವಕಾಶವಿದೆಯೋ ಅಂತಹ ಕಡೆ ಹೂಡಿಕೆದಾರರನ್ನು ಕರೆತರುವ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.

ಈವರೆಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರನ್ನು ಖಾಯಂಗೊಳಿಸಲು ಹಾಲಿ ಇರುವ ನಿಯಮಾವಳಿಗೆ ತಿದ್ದುಪಡಿ ಮಾಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ರಾಜಧಾನಿ ಬೆಂಗಳೂರಿನಲ್ಲಿ ಲೆಗ್ಸೋನ್ ಎಲೆಕ್ಟ್ರಾನಿಕ್ ಕಂಪನಿಗೆ ಬಯೋಪಾರ್ಕ್ ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಕೊಡಲಾಗಿದೆ.

Facebook Comments