ಛತ್ತೀಸ್‍ಗಡದಲ್ಲಿ 5 ಪ್ರಬಲ ಕುಕ್ಕರ್ ಬಾಂಬ್ ವಶ, ತಪ್ಪಿದ ಭಾರೀ ವಿಧ್ವಂಸಕ ಕೃತ್ಯ..!

ಈ ಸುದ್ದಿಯನ್ನು ಶೇರ್ ಮಾಡಿ

ರಾಯ್‍ಪುರ, ಮೇ 25-ಛತ್ತೀಸ್‍ಗಡದ ಕೊಂಡಗಾಂವ್ ಜಿಲ್ಲೆಯಲ್ಲಿ ಯೋಧರು ಮತ್ತು ಪೊಲೀಸರನ್ನು ಗುರಿಯಾಗಿಸಿಕೊಂಡು ಭಾರೀ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ನಕ್ಸಲರ ವ್ಯವಸ್ಥಿತ ಕುತಂತ್ರವೊಂದು ವಿಫಲಗೊಂಡಿದೆ.

ಕೊಂಡಗಾಂವ್ ಜಿಲ್ಲೆಯ ಕೇಶ್‍ಕಾಲಾ ಪೊಲೀಸ್ ಠಾಣಾ ವ್ಯಾಪ್ತಿಯ ಉಪಾರ್‍ಚಾಂಡೇಲಿ ಮತ್ತು ಕಾಳಿಚಾಂಡೇಲಿ ಗ್ರಾಮಗಳ ನಡುವಣ ದಾರಿಯಲ್ಲಿ ಹುದುಗಿರಿಸಲಾಗಿದ್ದ 5 ಪ್ರಬಲ ಸುಧಾರಿತ ಸ್ಫೋಟಕ ಗಳನ್ನು ಜಂಟಿ ಕಾರ್ಯಾಚರಣೆ ಪಡೆ ಪತ್ತೆ ಮಾಡಿದ್ದು, ಇದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.

ಐಇಡಿ ಸ್ಫೋಟಕಗಳನ್ನು ಕುಕ್ಕರ್‍ಗಳಲ್ಲಿ ಇಟ್ಟು ಯೋಧರು ಮತ್ತು ಪೊಲೀಸರ ವಾಹನಗಳನ್ನು ಸ್ಫೋಟಿಸಿ ಸಾವು-ನೋವು ಉಂಟು ಮಾಡುವುದು ನಕ್ಸಲರ ಉದ್ದೇಶವಾಗಿತ್ತು. ವಶಪಡಿಸಿಕೊಂಡ ಐದು ಸ್ಫೋಟಕಗಳು ತಲಾ 10 ಕೆಜಿ ತೂಕವಿದ್ದು, ಅತ್ಯಂತ ಪ್ರಬಲ ಎಂಬುದು ಪತ್ತೆಯಾಗಿದೆ.

ಈ ಪ್ರದೇಶದಲ್ಲಿ ನೆಲಬಾಂಬ್‍ಗಳನ್ನು ಹುದುಗಿರಿಸಲಾಗಿದೆ ಎಂಬ ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಾಚರಣೆ ಪಡೆ, ಸಿಆರ್‍ಪಿಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡ ಶೋಧ ನಡೆಸುತ್ತಿತ್ತು.

ಬಾಯಾರಿದ ಸಿಬ್ಬಂದಿ ನೀರಿಗಾಗಿ ಹತ್ತಿರದಲ್ಲೇ ಇದ್ದ ಬಾವಿ ಬಳಿ ಬಂದಾಗ ಸನಿಹದಲ್ಲೇ ಬಾಂಬ್ ಇರಿಸಿರುವುದು ಪತ್ತೆಯಾಗಿ ಎಲ್ಲಾ ಐದು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು. ನಂತರ ಬಾಂಬ್ ನಿಷ್ಕ್ರಿಯ ದಳ ಬಾಂಬ್‍ಗಳನ್ನು ನಿಷ್ಕ್ರಿಯಗೊಳಿಸಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ