ರಾಜ್ಯದ ಪ್ರಭಾವಿ ನಾಯಕರಿಗೆ ಪ್ರತಿಷ್ಠೆಯಾದ ಉಪಚುನಾವಣೆ…!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ಉಪ ಚುನಾವಣೆ ರಾಜಕೀಯ ಪಕ್ಷಗಳಿಗಷ್ಟೇ ಅಲ್ಲ, ರಾಜ್ಯದ ಪ್ರಭಾವಿ ನಾಯಕರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಕೆಲವೊಂದು ಕ್ಷೇತ್ರಗಳ ಮೇಲೆ ನಿರ್ದಿಷ್ಟ ಗುರಿಯಿಟ್ಟು, ತಮಗಾಗದೇ ಇರುವವರನ್ನು ಸೋಲಿಸಲು ಹಗಲು-ರಾತ್ರಿ ರಣತಂತ್ರ ರೂಪಿಸುತ್ತಿದ್ದಾರೆ.

ಕಾಂಗ್ರೆಸ್‍ನ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಜೆಡಿಎಸ್‍ನ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೆಲವೊಂದು ಕ್ಷೇತ್ರಗಳ ಮೇಲೆ ನಿರ್ದಿಷ್ಟ ಗುರಿಯಿಟ್ಟಿದ್ದು, ಶತಾಯ-ಗತಾಯ ಪಕ್ಷಗಳಿಗೆ ದ್ರೋಹಬಗೆದವರನ್ನು ಉಪ ಚುನಾವಣೆಯಲ್ಲಿ ಸೋಲಿಸಿ ಮನೆಗೆ ಕಳುಹಿಸುವ ಮೂಲಕ ರಾಜಕೀಯವಾಗಿ ಮುಗಿಸುವ ಶಪತ ಮಾಡಿದ್ದಾರೆ.

ಸಮ್ಮಿಶ್ರ ಸರ್ಕಾರ ರಚನೆ, ಅನಂತರದ ಬೆಳವಣಿಗೆಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಅಪಮಾನ ಮಾಡುವಂತೆ ನಡೆದಿವೆ. ತಾವೇ ಬೆಳೆಸಿದ ಶಾಸಕರು ತಮ್ಮ ಮಾತನ್ನೇ ಮೀರಿ ಬಿಜೆಪಿ ಜತೆ ಸೇರಿ ತೊಡೆತಟ್ಟಿದ್ದು, ಸಂಧಾನಕ್ಕಾಗಿ ಎಷ್ಟೇ ಮನವಿ ಮಾಡಿದರೂ ಕ್ಯಾರೆ ಎನ್ನದೆ ಸಾರ್ವಜನಿಕವಾಗಿ ಹಿಯ್ಯಾಳಿಸಿದ್ದು ಹಿರಿಯ ನಾಯಕರ ಮನಸ್ಸಿನಲ್ಲಿ ಆಳವಾದ ಗಾಯ ಮಾಡಿದೆ.

ರಾಜಕೀಯವಾಗಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದು ಎಷ್ಟು ನಿಜವೋ ಕಳೆದ ಒಂದೂವರೆ ವರ್ಷದಿಂದೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ವೈಯಕ್ತಿಕವಾಗಿ ಹಿರಿಯ ನಾಯಕರ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡಿರುವುದೂ ಅಷ್ಟೇ ನಿಜ. ಹೀಗಾಗಿ ಅನರ್ಹ ಶಾಸಕರ ಪೈಕಿ ಕೆಲವರನ್ನು ಸೋಲಿಸಲೇಬೇಕೆಂದು ಎರಡೂ ಪಕ್ಷಗಳ ಮುಖಂಡರು ಜಿದ್ದಿಗೆ ಬಿದ್ದಿದ್ದಾರೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಮೆಡಿಕಲ್ ಕಾಲೇಜು ವಿಷಯದಲ್ಲಿ ಚಿಕ್ಕಬಳ್ಳಾಪುರದ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಗಂಡಾಗುಂಡಿಗೆ ಬಿದಿದ್ದಾರೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ಡಿ.ಕೆ.ಶಿವಕುಮಾರ್ ಅವರು ಅತೃಪ್ತರ ಸಂಧಾನಕ್ಕಾಗಿ ಮುಂಬೈಗೂ ಹೋಗಿ ಭಾರೀ ಕಸರತ್ತು ನಡೆಸಿದ್ದರು. ಆ ವೇಳೆ ಡಿ.ಕೆ.ಶಿವಕುಮಾರ್ ನಮ್ಮ ರಾಜಕೀಯ ಗುರು. ಅವರಿಗೆ ಅವಮಾನ ಆಗುವುದನ್ನು ಸಹಿಸಿಕೊಳ್ಳುವುದಿಲ್ಲ. ಆದರೆ, ಅವರು ಇಲ್ಲಿ ಬಂದು ಸಂಧಾನ ಮಾಡುವ ಪ್ರಯತ್ನ ನಡೆಸುವುದು ಬೇಡ ಎಂದು ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದರು.

ಚಿಕ್ಕಬಳ್ಳಾಪುರದ ಸುಧಾಕರ್, ಹೊಸಕೋಟೆಯ ಎಂ.ಟಿ.ಬಿ.ನಾಗರಾಜ್ ಅವರನ್ನೂ ಒಳಗೊಂಡಂತೆ ಅನರ್ಹ ಶಾಸಕರನ್ನು ಡಿ.ಕೆ.ಶಿವಕುಮಾರ್ ರಣಾಂಗಣದಲ್ಲಿ ಭೇಟಿ ಮಾಡುತ್ತೇನೆ ಎಂದು ವಿಧಾನಸಭೆಯಲ್ಲೇ ಸವಾಲು ಹಾಕಿದ್ದರು. ಅದೇ ರೀತಿ ಬಳ್ಳಾರಿ ಜಿಲ್ಲೆಯ ವಿಜಯಗರ ಕ್ಷೇತ್ರವನ್ನೂ ಕೂಡ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಸಕೋಟೆ, ಹುಣಸೂರು, ಕೆ.ಆರ್.ಪುರಂ, ಗೋಕಾಕ್ ಕ್ಷೇತ್ರಗಳು ಅತ್ಯಂತ ಪ್ರಮುಖವಾಗಿವೆ. ಈ ಕ್ಷೇತ್ರಗಳಲ್ಲಿ ಅನರ್ಹ ಶಾಸಕರನ್ನು ಸೋಲಿಸಲೇಬೇಕೆಂದು ಸಂದೇಶ ರವಾನಿಸಿರುವ ಸಿದ್ದರಾಮಯ್ಯ, ಖುದ್ದಾಗಿ ತಾವೇ ಇಲ್ಲಿ ಹೆಚ್ಚು ಸಮಯ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಹುಣಸೂರು, ಕೆ.ಆರ್.ಪೇಟೆ, ಮಹಾಲಕ್ಷ್ಮಿಲೇಔಟ್ ಕ್ಷೇತ್ರಗಳನ್ನು ಸವಾಲಾಗಿ ತೆಗೆದುಕೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕ್ಷೇತ್ರಗಳ ಜತೆಗೆ ಗೋಕಾಕ್, ಹೋಸಕೋಟೆ, ಚಿಕ್ಕಬಳ್ಳಾಪುರ ಹಾಗೂ ಯಶವಂತಪುರ ಕ್ಷೇತ್ರಗಳ ಅನರ್ಹ ಶಾಸಕರನ್ನು ಮನೆಗೆ ಕಳುಹಿಸಲು ಪಣತೊಟ್ಟಿದ್ದಾರೆ.

ಪ್ರಭಾವಿ ನಾಯಕರ ಕೆಂಗಣ್ಣಿಗೆ ಗುರಿಯಾಗಿರುವ ಅನರ್ಹ ಶಾಸಕರು ರಾಜಕೀಯವಾಗಿ ಅಷ್ಟೇ ಪ್ರಮಾಣದಲ್ಲಿ ಸವಾಲನ್ನು ಎಸೆಯುತ್ತಿದ್ದು, ಎಲ್ಲ ಪ್ರಭಾವವನ್ನೂ ಮೀರಿ ಗೆದ್ದುಬರುವ ವಿಶ್ವಾಸದಲ್ಲಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಕೆಲವು ಕ್ಷೇತ್ರಗಳಷ್ಟೇ ಗುರಿಯಾಗಿದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ 15ಕ್ಕೆ 15 ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಿ ತಮ್ಮ ಸರ್ಕಾರವನ್ನು ಉಳಿಸಿಕೊಳ್ಳುವುದು ಹಾಗೂ ಹೈಕಮಾಂಡ್ ಮುಂದೆ ತಾವು ಇನ್ನೂ ಗಟ್ಟಿನಾಯಕರು ಎಂದು ಸಾಬೀತುಪಡಿಸುವ ಜರೂರಿದೆ. ಹಾಗಾಗಿ ತಮ್ಮ ಇಡೀ ಸಂಪುಟವನ್ನು ಚುನಾವಣಾ ಅಕಾಡಕ್ಕಿಳಿಸಿದ್ದಲ್ಲದೆ, ತಾವೂ ಕೂಡ ಹಗಲು-ರಾತ್ರಿ ಎನ್ನದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

Facebook Comments