ಭಾರತದಲ್ಲಿ ಪ್ರತಿದಿನ 3 ಲಕ್ಷ ಪಿಪಿಇ, ಮಾಸ್ಕ್ ತಯಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 25- ವೈಯಕ್ತಿಕ ಸುರಕ್ಷತಾ ಸಾಧನಗಳು ಪಿಪಿಇ ಮತ್ತು ಮಾಸ್ಕ್ ಗಳ ತಯಾರಿಕೆಯಲ್ಲಿ ಭಾರತದ ಸಾಮಥ್ರ್ಯ ಸಾಬೀತಾಗಿದ್ದು , ಉತ್ತಮ ಗುಣಮಟ್ಟದ ಉತ್ಪನ್ನಗಳಿಗೆ ಆದ್ಯತೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಪ್ರತಿ ದಿನ ತಲಾ 3 ಲಕ್ಷ ಪಿಪಿಇ ಮತ್ತು ಎನ್95 ಮಾಸ್ಕ್‍ಗಳನ್ನು ತಯಾರಿಸಲಾಗುತ್ತಿದೆ.

ಈ ಮೂಲಕ ಭಾರತದ ಆರೋಗ್ಯ ರಕ್ಷಣಾ ಸಾಧನಗಳ ಉತ್ಪಾದನೆ ಸಾಮಥ್ರ್ಯ ಸಾಬೀತಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೆಲವು ಮಾಧ್ಯಮಗಳಲ್ಲಿ ಕೇಂದ್ರ ಸರ್ಕಾರದ ಪಿಪಿಇ ಮತ್ತು ಎನ್ 95 ಫೇಸ್ ಮಾಸ್ಕ್‍ಗಳ ಗುಣಮಟ್ಟ ಕಳಪೆಯಾಗಿದೆ ಎಂಬ ವರದಿಯನ್ನು ಆರೋಗ್ಯ ಸಚಿವಾಲಯದ ಉನ್ನತಾಧಿಕಾರಿಗಳು ತಳ್ಳಿ ಹಾಕಿದ್ದಾರೆ.

ಇವುಗಳ ತಯಾರಿಕೆಯಲ್ಲಿ ಗರಿಷ್ಠ ಗುಣಮಟ್ಟಕ್ಕೆ ಆದ್ಯತೆ ನೀಡಲಾಗಿದೆ. ವಿವಿಧ ಪರೀಕ್ಷೆಗಳ ನಂತರವಷ್ಟೇ ಇವುಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಉತ್ಪನ್ನಗಳು ಕಳಪೆಯಾಗಿವೆ ಎಂಬ ಆರೋಪಗಳಿಗೆ ಆಧಾರವಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.  ದೇಶದ ನಾಗರಿಕರಿಗೆ ಪಿಪಿಇ ಮತ್ತು ಎನ್ 95 ಮಾಸ್ಕ್‍ಗಳ ಕೊರತೆ ಇಲ್ಲ.

ಉತ್ತಮ ಗುಣಮಟ್ಟದ ಈ ಉತ್ಪನ್ನಗಳನ್ನು ದಿನಂ ಪ್ರತಿ 3 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿಸಲಾಗುತ್ತಿದೆ. ನಮ್ಮ ಉತ್ಪನ್ನಗಳು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿಸಮಾನವಾಗಿದೆ. ಇವುಗಳ ಬಳಕೆಯಲ್ಲಿ ಯಾವುದೇ ಆತಂಕ ಬೇಡ ಎಂದು ಸಚಿವಾಲಯ ತಿಳಿಸಿದೆ.

ಕೇಂದ್ರ ಸರ್ಕಾರದಿಂದ ಉತ್ಪಾದಿಸಲಾಗುತ್ತಿರುವ ಕೊರೊನಾ ವೈರಸ್ ನಿಯಂತ್ರಣ ಆರೋಗ್ಯ ಪರಿಕರಗಳು ಮತ್ತು ಫೇಸ್ ಮಾಸ್ಕ್‍ಗಳು ಕಳಪೆ ಮತ್ತು ದುಬಾರಿಯಾಗಿವೆ. ಇದರಲ್ಲಿ ಅಕ್ರಮ ಅವ್ಯವಹಾರ ನಡೆದಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನು ಕೇಂದ್ರ ಆರೋಗ್ಯ ಸಚಿವಾಲಯ ತಳ್ಳಿ ಹಾಕಿತ್ತು.

Facebook Comments