ರೈತರು ಗ್ರಾಮೀಣ ಆರ್ಥಿಕತೆಯ ಪ್ರೇರಕ ಶಕ್ತಿ : ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮಾ.1 (ಪಿಟಿಐ)- ದೇಶದ ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ)ದ ಮೂಲಕ ಆಹಾರ ಸಂಸ್ಕರಣಾ ಕ್ರಾಂತಿಯನ್ನು ತರುವ ಅಗತ್ಯವಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು. ಕೃಷಿ ಕ್ಷೇತ್ರಕ್ಕೆ ಬಜೆಟ್ ನಿಬಂಧನೆಗಳ ಕುರಿತು ವೆಬಿನಾರ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಹಣಕಾಸು ವರ್ಷದಲ್ಲಿ ಆಯವ್ಯಯದಲ್ಲಿ ಸರ್ಕಾರ ಕೈಗೊಂಡ ವಿವಿಧ ಉಪಕ್ರಮಗಳನ್ನು ಎತ್ತಿ ತೋರಿಸಿದರು. ಕೃಷಿ ಸಾಲದ ಗುರಿಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲಿ 15 ಲಕ್ಷ ಕೋಟಿಯಿಂದ 16.5 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದರು.

ಬಜೆಟ್ ನಿಬಂಧನೆಗಳ ಪರಿಣಮಕಾರಿ ಅನುಷ್ಠಾನಕ್ಕೆ ಅವರು ಒತ್ತು ನೀಡಿ ಮಾತನಾಡಿ,12 ಕೋಟಿ ಸಣ್ಣ ಮತ್ತು ಮಧ್ಯಮ ರೈತರ ಅನುಕೂಲಕ್ಕಾಗಿ ಸರ್ಕಾರ ವಿವಿಧ ನಿರ್ಧಾರಗಳನ್ನು ತೆಗೆದುಕೊಂಡಿದೆ. ನಮ್ಮ ರೈತರು ಗ್ರಾಮೀಣ ಆರ್ಥಿಕತೆಯ ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶದಲ್ಲಿ ಅಹಾರೋ ತ್ಪಾದನೆ ಹೆಚ್ಚುತ್ತಿರುವಾಗ ಸುಗ್ಗಿಯ ನಂತರದ ಕ್ರಾಂತಿ ಅಥವಾ ಆಹಾರ ಸಂಸ್ಕರಣಾ ಕ್ರಾಂತಿ ಮತ್ತು ಮೌಲ್ಯವರ್ಧನೆಗಳ ಅವಶ್ಯಕತೆಯಿದೆ. ಭಾರತದಲ್ಲಿ ಆಹಾರ ಸಂಸ್ಕರಣೆಗೆ ಎರಡು ಮೂರು ದಶಕಗಳ ಹಿಂದೆಯೇ ಗಮನಹರಿಸಿದ್ದರೆ ಚೆನ್ನಾಗಿತ್ತು. ಈಗಲೂ ಕಾಲ ಮಿಂಚಿಲ್ಲ, ಈ ಕ್ಷೇತ್ರದ ಅಭಿವೃದ್ಧಿಯ ಅಗತ್ಯವಿದೆ. ಅದು ಆದಷ್ಟು ವೇಗವಾಗಿ ಆಗಬೇಕಿದೆ. ಆಹಾರ ಸಂಸ್ಕರಣಾ ಕ್ರಾಂತಿ ಆಗಬೇಕೆಂದರೆ, ರೈತರ ಭಾಗವಹಿಸುವಿಕೆ ಮತ್ತು ಸಾರ್ವಜನಿಕ, ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸುವ ಅಗತ್ಯವಿದೆ.

ಕೃಷಿ ಕ್ಷೇತ್ರದಲ್ಲಿ ಸಾರ್ವಜನಿಕ ವಲಯವು ಮುಖ್ಯವಾಗಿ ಆರ್ ಅಂಡ್ ಡಿಗೆ ಕೊಡುಗೆ ನೀಡಿದೆ. ಈಗ ಖಾಸಗಿ ವಲಯದ ಭಾಗವಹಿಸುವಿಕೆ ಹೆಚ್ಚಿಸುವ ಸಮಯ ಬಂದಿದೆ. ಬೆಳೆಯುವ ಗೋಧಿ ಮತ್ತು ಭತ್ತಕ್ಕೆ ಸೀಮಿತವಾಗಿರದಂತೆ ರೈತರಿಗೆ ಪರ್ಯಾಯ ಮಾರ್ಗಗಳನ್ನು ನೀಡಬೇಕಿದೆ ಎಂದು ಹೇಳಿದರು.

ದೇಶದ ಕೃಷಿ ಕ್ಷೇತ್ರವನ್ನು ಜಾಗತಿಕ ಸಂಸ್ಕರಿಸಿದ ಆಹಾರ ಮಾರುಕಟ್ಟೆಗೆ ವಿಸ್ತರಿಸಬೇಕು. ಗ್ರಾಮಗಳ ಉದ್ದಕ್ಕೂ ಕೃಷಿ ಕೈಗಾರಿಕೆಗಳ ಸಮೂಹ ಹೆಚ್ಚಿಸುವ ಮೂಲಕ ಗ್ರಾಮೀಣ ಜನರ ಕೃಷಿಗೆ ಸಂಬಂಧಿಸಿದ ಉದ್ಯೋಗವನ್ನು ಪಡೆಯಬಹುದು. ಆದ್ದರಿಂದ ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‍ಅಪ್‍ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಿದೆ.

ಕೊರೊನಾರ ಸಾಂಕ್ರಾಮಿಕ ಕಾಲದಲ್ಲಿ ಈ ಕ್ಷೇತ್ರ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿ ಶ್ಲಾಘಿಸಿದ ಮೋದಿ, ಗ್ರಾಮ ಮಟ್ಟದಲ್ಲಿ ಮಣ್ಣಿನ ತಪಾಸಣೆ ಜಾಲವನ್ನು ಸ್ಥಾಪಿಸುವುದು ಹಾಗೂ ರೈತರಿಗೆ ತಂತ್ರಜ್ಞಾನದ ಬಳಕೆ ಬಗ್ಗೆಯೂ ಪ್ರೋತ್ಸಾಹ ನೀಡಬೇಕೆಂದು ಸಲಹೆ ನೀಡಿದರು.

Facebook Comments