ರಾಜ್ಯದಲ್ಲಿ ಶೀಘ್ರವೇ ಬರಲಿವೆ ಪಶು ಆಂಬ್ಯುಲೆನ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ,ಜು.8- ರಾಜ್ಯದಲ್ಲಿ ಶೀಘ್ರವೇ ಪಶು ಆಂಬ್ಯುಲೆನ್ಸ್ ಗಳನ್ನು ಜಾರಿಗೆ ತರುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ಪಶುಸಂಗೋಪನೆ, ಹಜ್, ಮತ್ತು ವಕ್ಫ್ ಸಚಿವ ಪ್ರಭು ಬಿ.ಚವ್ಹಾಣ್ ತಿಳಿಸಿದರು. ಪಶುಸಂಗೋಪನೆ ಇಲಾಖೆ, ಹಜ್ ಮತ್ತು ವಕ್ಫ್ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶಿಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶುಪಾಲನೆ ಇಂದು ಕೇವಲ ಒಂದು ಕಸುಬಾಗಿ ಉಳಿಯದೇ ಉದ್ಯಮವಾಗಿ ಬೆಳೆಯುತ್ತಿದೆ.

ಪಶುಪಾಲನೆ ಈ ಹಂತಕ್ಕೇರಲು ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆಯ ಕೊಡುಗೆ ಅಪಾರ. ರೋಗಗ್ರಸ್ಥ ಪ್ರಾಣಿ ಮತ್ತು ಪಕ್ಷಿಗಳ ಚಿಕಿತ್ಸೆ ಹಾಗೂ ರೋಗಗಳ ತಡೆಗಟ್ಟುವಿಕೆಗಾಗಿ ವ್ಯಾಪಕ ಲಸಿಕಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಗೋಮಾತಾ ನಮ್ಮ ಮಾತ ಎನ್ನುವ ನಾಣ್ಣುಡಿಯಂತೆ ಪಶುಪಾಲನೆಯನು ಸಂರಕ್ಷಣೆ ಮಾಡುವ ದಿಸೆಯಲ್ಲಿ ತಾನು ಮಂತ್ರಿಯಾದ ನಂತರ ಪಶುಪಾಲನೆ ಭವನವನ್ನು ನಿರ್ಮಾಣ ಮಾಡಲಾಗಿದೆ ಅದೇ ರೀತಿ ಪ್ರಾಣಿ ರಕ್ಷಣೆಯಾಗುವ ದಿಸೆಯಲ್ಲಿ ಪ್ರಾಣಿಕಲ್ಯಾಣಿ ಮಂದಿರವನ್ನು ತೆರೆಯಲಾಗಿದೆ. ರೈತರಿಗೆ ವರದಾನವಾಗುವ ದಿಸೆಯಲ್ಲಿ ಪಶುಪಾಲನೆಯನ್ನು ಇನ್ನಷ್ಟು ಅಭಿವೃದ್ದಿಪಡಿಸುವ ಇರಾದೆ ಹೊಂದಲಾಗಿದೆ ಎಂದರು.

ವಕ್ಫ್ ಆಸ್ತಿ ಸಂರಕ್ಷಣೆ ಸಂಭಂದ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಸಂರಕ್ಷಣೆ ಸಂಭಂದ ಕರ್ನಾಟಕ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‍ಮಾಣಿಪ್ಪಡಿ ಸಲ್ಲಿಸಿದ್ದ ವರದಿ ಸರ್ಕಾರಕ್ಕೆ ತಲುಪಿದ್ದು ಅದು ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಿದೆ ಆದರೂ ಆ ಸಂದರ್ಭದಲ್ಲಿ ವಿಧಾನಸಭೆ ಅಧಿವೇಶನ ಮುಂದೂಡಲ್ಪಟ್ಟ ಕಾರಣ ಚರ್ಚೆಗೆ ಅವಕಾಶ ಸಿಗಲಿಲ್ಲ ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಚರ್ಚಿಸಿ ಆಸ್ತಿ ಸಂರಕ್ಷಣೆ ಸಂಭಂದ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಈ ಆಸ್ತಿ ಸಂರಕ್ಷಣೆ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಆದರೆ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸಮಗ್ರ ಚರ್ಚಿಗಿರಿಸಿ ಕ್ರಮ ಜರುಗಿಸುವ ಭರವಸೆ ಸಚಿವರು ನೀಡಿದರು. ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಇದೇ ಬಿಜೆಪಿ ನಾಯಕರು ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡನೆಗೆ ಆಗ್ರಹಿಸಿದ್ದಲ್ಲದೆ ಬಹುಕೋಟಿ ವಕ್ಫ್ ಆಸ್ತಿ ಕಬಳಿಕೆ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Facebook Comments