ಜಾನುವಾರಗಳ ಆರೋಗ್ಯಕ್ಕೂ ಮನುಷ್ಯರ ಆರೋಗ್ಯದಷ್ಟೆ ಒತ್ತು ನೀಡಿ : ಸಚಿವ ಪ್ರಭು ಚವ್ಹಾಣ್

ಈ ಸುದ್ದಿಯನ್ನು ಶೇರ್ ಮಾಡಿ

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶದಲ್ಲಿ 21 ದಿನಗಳ ಸಂಪೂರ್ಣ ಲಾಕಡೌಲ್ ಮಾಡಲಾಗಿದ್ದು, ಅಗತ್ಯ ಸೇವೆಗಳಿಗೆ ಮಾತ್ರ ರಾಜ್ಯ ಸರ್ಕಾರ ಅನುಮತಿಸಿದೆ. ಇತ್ತೀಚೆಗೆ ಪಶುಸಂಗೋಪನೆಯನ್ನು ಸಹ ಅಗತ್ಯ ಸೇವೆಗಳ ಅಡಿಯಲ್ಲಿ ಪರಿಗಣಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಲಾಕ್ ಡೌನ್ ನಿಂದಾಗಿ ಗ್ರಾಮೀಣ ಭಾಗದ ಜನರ ಜಾನುವಾರುಗಳಿಗೆ ಅಗತ್ಯ ಮೇವು ಮತ್ತು ಔಷಧಿಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಹಾಗೂ ಮನುಷ್ಯರ ಆರೋಗ್ಯಕ್ಕೆ ಒತ್ತು ನೀಡಿದಷ್ಟು ಮೂಖ ಜಾನುವಾರಗಳ ಆರೋಗ್ಯಕ್ಕೂ ಒತ್ತು ನೀಡಿ. ಅವುಗಳಿಗೆ ಯಾವುದೇ ತರಹದ ಸಮಸ್ಯೆ ಎದುರಾಗದಂತೆ ಎಚ್ಚರವಹಿಸಿ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವರಾದ ಪ್ರಭು ಚವ್ಹಾಣ್ ರವರು ಇಲಾಖೆಯ ಕಾರ್ಯದರ್ಶಿ, ಆಯುಕ್ತರು ಹಾಗೂ ಅಧಿಕಾರಿಗಳಿಗೆ ಕಟ್ಟುನಿಟ್ಟಾದ ಆದೇಶಗಳನ್ನು ನೀಡಿದ್ದಾರೆ.

ರಾಜ್ಯದಲ್ಲಿ ಸದ್ಯ ಲಾಕ್ ಡೌನ್ ಇರುವುದರಿಂದ ಎಲ್ಲ ಜಿಲ್ಲೆಗಳಲ್ಲಿ ಮೇವಿನ ಕೊರತೆ ಎದುರಾಗದಂತೆ ಕ್ರಮ ವಹಿಸಲು ಸೂಚಿಸಲಾಗಿದೆ. ಮೇವು ಮತ್ತು ಔಷಧ ಕೊರತೆ ಇರುವ ಜಿಲ್ಲೆಗಳನ್ನು ತಕ್ಷಣಕ್ಕೆ ಗುರುತಿಸಿ ಮೇವು ಮತ್ತು ಔಷಧ ಸರಬರಾಜಿಗೆ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಹಕ್ಕಿ ಜ್ವರ, ಹಂದಿ ಜ್ವರದ ಪ್ರಕರಣಗಳು ಕಂಡುಬಂದಲ್ಲಿ ರೋಗ ಪತ್ತೆ ಮತ್ತು ಅದರ ನಿಯಂತ್ರಣದ ಬಗ್ಗೆ ಅಧಿಕಾರಿಗಳು ತಕ್ಷಣಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ರಾಜ್ಯದ ಯಾವುದೇ ಜಿಲ್ಲೆಗಳಿಂದ ಜಾನುವಾರಗಳಿಗೆ ಚಿಕಿತ್ಸೆ ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದು ಹಾಗೂ ಅಗತ್ಯವಿದ್ದ ಕಡೆಗಳಲ್ಲಿ ವೈದ್ಯರು ಗೈರಾಗಿ ಕರ್ತವ್ಯ ಲೋಪ ಕಂಡುಬಂದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ.

ಅಗತ್ಯತೆಗೆ ಅನುಗುಣವಾಗಿ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯ ಸಿಬ್ಬಂದಿಗಳ ನಿಯೋಜನೆ ಮತ್ತು ಔಷಧಿಗಳ ಕೊರತೆಯಾಗದಂತೆ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ. ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳನ್ನು ನೀಡಿ ಅವರ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆ ಇಲಾಖೆ ಗಮನ ಹರಿಸಲು ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಜಾನುವಾರುಗಳಿಗೆ ಅಗತ್ಯ ವಿರುವ ಹುಲ್ಲು, ತಿಂಡಿ ಮಿಶ್ರಣ, ಆಹಾರ ಯಾವುದೇ ಅಡೆತಡೆಯಿಲ್ಲದೆ ಸರಬರಾಜು ಮಾಡಲು ಸ್ಥಳೀಯ ಆಡಳಿತದೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ತುರ್ತು ಪರಿಸ್ಥಿತಿಯನ್ನು ಎದುರಿಸಲು ಜಿಲ್ಲೆ/ತಾಲೂಕ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಮತ್ತು ಅವಶ್ಯ ಸಿಬ್ಬಂದಿ, ಔಷಧಿ ಮತ್ತು ವಾಹನ ವ್ಯವಸ್ಥೆ ಮಾಡಲು ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಅಲ್ಲದೆ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಸ್ಥಳಿಯರೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದು ಚಿಕಿತ್ಸೆ ನೀಡಲು ತಿಳಿಸಲಾಗಿದೆ.

Facebook Comments

Sri Raghav

Admin