ಕಾರ್ಯಕ್ರಮಕ್ಕೆ ಆಹ್ವಾನಿಸದ ಹಿನ್ನೆಲೆಯಲ್ಲಿ ಕೋಪಗೊಂಡ ಕೇಂದ್ರ ಸಚಿವ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.18- ರಾಜ್ಯ ಸರ್ಕಾರದ ವತಿಯಿಂದ ಇಲ್ಲಿನ ಚಾಣುಕ್ಯಪುರಿ ಮಾರ್ಗ್‍ನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕರ್ನಾಟಕ ಭವನದ ಶಂಕುಸ್ಥಾಪನೆಗೆ ಆಹ್ವಾನ ನೀಡದಿರುವ ಅಧಿಕಾರಿಗಳ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕಿಡಿಕಾರಿದ ಘಟನೆ ನಡೆದಿದೆ.

ಬೆಳಗ್ಗೆ ಸರ್ಕಾರದ ವತಿಯಿಂದ ಕರ್ನಾಟಕ ಭವನ-1(ಕಾವೇರಿ) ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ಹಮ್ಮಿಕೊಳ್ಳಲಾಗಿತ್ತು. ಶಿಷ್ಟಾಚಾರದ ಪ್ರಕಾರ ರಾಜ್ಯ ಸರ್ಕಾರ ಕೇಂದ್ರವನ್ನು ಪ್ರತಿನಿಧಿಸುವ ಸಚಿವರನ್ನು ಆಹ್ವಾನ ಕೊಡಬೇಕಿತ್ತು.

ಆಮಂತ್ರಣ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಕೆಲವರ ಹೆಸರನ್ನು ಮುದ್ರಿಸಲಾಗಿತ್ತು.

ಆದರೆ ರಾಜ್ಯವನ್ನು ಪ್ರತಿನಿಧಿಸುವ ಪ್ರಹ್ಲಾದ್ ಜೋಷಿ ಹೆಸರು ಮುದ್ರಣ ಮಾಡದೆ ಕಾರ್ಯಕ್ರಮಕ್ಕೆ ಆಹ್ವಾನವೂ ಕೊಟ್ಟಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಪ್ರಹ್ಲಾದ್ ಜೋಷಿ, ಕಾರ್ಯಕ್ರಮವನ್ನು ಬಹಿಷ್ಕರಿಸಿ ಹೊರನಡೆಯಲು ಮುಂದಾದರು.

ತಾವು ಕೇಂದ್ರ ಸಚಿವರಾಗಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ತಮಗೆ ಶಿಷ್ಟಾಚಾರದಂತೆ ಆಹ್ವಾನವನ್ನೇ ಕೊಡಲಿಲ್ಲ. ದುರುದ್ದೇಶಪೂರ್ವಕವಾಗಿಯೇ ಕಡೆಗಣಿಸಲಾಗಿದೆ ಎಂದು ಅಸಮಾಧಾನಗೊಂಡಿದ್ದಲ್ಲದೆ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಮನವೊಲಿಸಿ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಈ ಬೆಳವಣಿಗೆಯಿಂದಾಗಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

Facebook Comments