ಸಿಎಂಗೆ ಕುರ್ಚಿ ಉಳಿಸಿಕೊಳ್ಳೋದೇ ದೊಡ್ಡ ಕೆಲಸ ಆಗಿದೆ : ಪ್ರಹ್ಲಾದ್ ಜೋಷಿ ಕಿಡಿ
ಹುಬ್ಬಳ್ಳಿ, ಮೇ 7- ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗಿದೆ. ಆದರೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳುವತ್ತ ಗಮನ ಹರಿಸಿ ದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಷಿ ಕಿಡಿಕಾರಿದ್ದಾರೆ.
ಮೇ 23ರ ಫಲಿತಾಂಶದವರೆಗೆ ಕಾಯಲು ಯಾರೊಬ್ಬರು ಸಿದ್ದರಿಲ್ಲ. ಅಷ್ಟರೊಳಗೆ ಸರ್ಕಾರವನ್ನು ಅಸ್ಥಿರಗೊಳಿಸ ಬೇಕೆಂ ಬುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹುನ್ನಾರ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಸಿದ್ದರಾಮಯ್ಯನವರ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಒಂದು ಕಡೆ ಮಗನ ಕುರ್ಚಿ ಉಳಿಸಿಕೊಳ್ಳುವ ತವಕದಲ್ಲಿದ್ದರೆ ಹಾಸನ ಮತ್ತು ಮಂಡ್ಯದಲ್ಲಿ ಮೊಮ್ಮಕ್ಕಳ ಫಲಿತಾಂಶ ಏನಾಗಲಿದೆ ಎಂಬ ಆತಂಕದಲ್ಲಿದ್ದಾರೆ. ಜನರ ಪಾಲಿಗೆ ಸರ್ಕಾರ ಇದ್ದು ಇಲ್ಲದಂತಾಗಿದೆ ಎಂದು ವಾಗ್ದಾಳಿ ನಡೆಸಿದರು.
ಅಪನಂಬಿಕೆ ಮತ್ತು ಸಂಶಯಗಳು ಇದ್ದರೆ ಸರ್ಕಾರ ಯಾವ ರೀತಿ ನಡೆಯಬಹುದು ಎಂಬುದಕ್ಕೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವೇ ತಾಜಾ ನಿದರ್ಶನ. ಕುಮಾರಸ್ವಾಮಿ ವಿರುದ್ಧ ಶಾಸಕರನ್ನು ಎತ್ತಿ ಕಟ್ಟಲು ಸಿದ್ಧರಾಮಯ್ಯ ಹವಣಿಸುತ್ತಿ ದ್ದಾರೆ. ನನ್ನ ಕುರ್ಚಿ ಹೇಗೆ ಉಳಿಸಿಕೊಳ್ಳಬೇಕೆಂಬುದು ಅವರ ಚಿಂತೆಯಾಗಿದೆ. ಹೀಗಾಗಿ ಸರ್ಕಾರ ಎಲ್ಲ ಕ್ಷೇತ್ರಗಳಲ್ಲೂ ವಿಫಲವಾಗಿದೆ ಎಂದು ದೂರಿದರು.
ಎರಡು ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಪರಿಣಾಮ ಅನೇಕ ಕಡೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳೇ ಸೋಲಲಿದ್ದಾರೆ. ಯಾವುದೇ ಕಾರಣಕ್ಕೂ ದೋಸ್ತಿ ಪಕ್ಷ ಎರಡಂಕಿ ದಾಟುವುದಿಲ್ಲ. ನಾವು ಕನಿಷ್ಟ ಎಂದರೂ 18ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ವಿರುದ್ದವೂ ವಾಗ್ದಾಳಿ ನಡೆಸಿದ ಪ್ರಹ್ಲಾದ್ ಜೋಷಿ ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್. ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಆಡಳಿತ ನಡೆಸಿದೆ. ಪರಿಣಾಮ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.