ವೇದಿಕೆಯಿಂದ ಎದ್ದು ಹೋಗಿದ್ದಕ್ಕೆ ಸ್ಪಷ್ಟನೆ ನೀಡಿದ ಪ್ರಜ್ವಲ್ ರೇವಣ್ಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.2- ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣದಲ್ಲಿ ನನಗೆ ನೀಡಿದ್ದ ಜವಾಬ್ದಾರಿಯನ್ನು ನಿಭಾಯಿಸಲು ಬಹಿರಂಗ ಪ್ರಚಾರ ಸಭೆಯಿಂದ ಹೊರ ಹೋಗಿದ್ದೇನೆಯೇ ಹೊರತು, ಯಾವುದೇ ಅಸಮಾದಾನದಿಂದಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಸ್ಪಷ್ಟ ಪಡಿಸಿದ್ದಾರೆ.

ನಿನ್ನೆ ಶಿರಾದಲ್ಲಿ ನಡೆದ ಬಹಿರಂಗ ಪ್ರಚಾರ ಸಭೆಯಲ್ಲಿ ಪ್ರಜ್ವಲ ರೇವಣ್ಣ ಅವರು ಅಸಮಾಧಾನಿತರಾಗಿ ವೇದಿಕೆಯಿಂದ ನಿರ್ಗಮಿಸಿದರು ಎಂದು ವರದಿಯಾಗಿತ್ತು. ಈ ವರದಿಗಳು ಕೇವಲ ಕಪೋಲಕಲ್ಪಿತ ಎಂದು ಪ್ರಜ್ವಲ್ ಸ್ಪಷ್ಟ ಪಡಿಸಿದ್ದಾರೆ.

ನೆನ್ನೆಯ ದಿನ ಜೆಡಿಎಸ್ ಪಕ್ಷದ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿರಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ನನ್ನನ್ನು ಎರಡು ಹೋಬಳಿಯ ಪ್ರಚಾರದ ಉಸ್ತುವಾರಿಯನ್ನಾಗಿ ಪಕ್ಷ ನೇಮಿಸಿತ್ತು. ಬಹುತೇಕ ಗ್ರಾಮಗಳ ಪ್ರಚಾರವನ್ನು ಯಶಸ್ವಿಯಾಗಿ ಮುಗಿಸಿ ಕೇವಲ ಇನ್ನೆರಡು ಗ್ರಾಮಗಳ ಪ್ರಚಾರದ ಸಭೆ ಬಾಕಿ ಉಳಿದಿತ್ತು.

ಈ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ನನ್ನ ಬರುವಿಕೆಗಾಗಿ ಕಾಯುತ್ತಿದ್ದರು ಹಾಗಾಗಿ ನಾನು ಆ ಪ್ರಚಾರ ಸಭೆಗೆ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಿದ್ದರಿಂದ ದೇವೇಗೌಡ್ರು ಹಾಗೂ ಕುಮಾರಣ್ಣನಿಗೆ ಮಾಹಿತಿ ನೀಡಿ ವೇದಿಕೆಯಿಂದ ನಿರ್ಗಮಿಸಿ, ಎರಡೂ ಗ್ರಾಮಗಳಿಗೆ ತೆರಳಿ ಪ್ರಚಾರ ಮುಗಿಸಿ ಪಕ್ಷ ನನಗೆ ನೀಡಿದ್ದ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ.

ಕಾರ್ಯಕರ್ತರು ಮಾಧ್ಯಮಗಳ ಕಪೋಲಕಲ್ಪಿತ ಸುದ್ದಿಗಳಿಗೆ ಕಿವಿಗೊಟ್ಟು ಗೊಂದಲಕ್ಕೆ ಒಳಗಾಗದೆ ಯಶಸ್ವಿಯಾಗಿ ಚುನಾವಣೆ ನಡೆಸಿ ಅಭ್ಯರ್ಥಿ ಶ್ರೀಮತಿ ಅಮ್ಮಾಜಮ್ಮ ಸತ್ಯನಾರಾಯಣ ಅವರ ಗೆಲುವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Facebook Comments