ಬ್ರೇಕಿಂಗ್ : ಗೆದ್ದ ಮರುದಿನವೇ ಪ್ರಜ್ವಲ್ ರೇವಣ್ಣ ರಾಜೀನಾಮೆ..! ತಾತನಿಗಾಗಿ ಮೊಮ್ಮಗ ತ್ಯಾಗ..?

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ, ಮೇ 24-ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಜೆಡಿಎಸ್‍ನಲ್ಲಿ ನಡೆದ ವಿದ್ಯಮಾನದಿಂದಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಪ್ರಜ್ವಲ್ ರೇವಣ್ಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಇಂದು ಘೋಷಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗಾಗಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಡಲು ಸಿದ್ಧವಿದ್ದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಜ್ವಲ್ ಹೇಳಿದರು.

ದೇವೇಗೌಡರಿಗೆ ಶಕ್ತಿ ತುಂಬುವುದು ತಮ್ಮ ಉದ್ದೇಶವಾಗಿದ್ದು, ಇಡೀ ರಾತ್ರಿ ಗಂಭೀರ ಚಿಂತನೆ ನಡೆಸಿ ಈ ನಿರ್ಧಾರಕ್ಕೆ ಬಂದಿದ್ದು, ಹಾಸನ ಜಿಲ್ಲೆ ಜನರು ತಪ್ಪು ತಿಳಿಯಬಾರದು ಎಂದು ಮನವಿ ಮಾಡಿದ್ದಾರೆ.

ದೇವೇಗೌಡರು ನನಗೆ ದೇವರ ಸಮಾನವಾಗಿದ್ದು, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಯಾವುದೇ ಬೇಜಾರಿಲ್ಲ. ಈ ಬಗ್ಗೆ ದೇವೇಗೌಡರ ಬಳಿಯೂ ವಿಷಯ ಪ್ರಸ್ತಾಪಿಸಿಲ್ಲ ಎಂದರು.

ತಾವು ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ಬಿಟ್ಟುಕೊಡುವ ವಿಚಾರದ ಬಗ್ಗೆ ದೇವೇಗೌಡರ ಮನವೊಲಿಸುವುದಾಗಿ ಹೇಳಿದ ಪ್ರಜ್ವಲ್, ಲೋಕಸಭೆ ಚುನಾವಣೆ ಮುಂಚೆಯೂ ಕ್ಷೇತ್ರವನ್ನು ಬಿಟ್ಟುಕೊಡುವುದಾಗಿ ಹೇಳಿದ್ದೆ. ಆ ನಿರ್ಧಾರಕ್ಕೆ ಈಗಲೂ ಬದ್ಧ ಎಂದರು.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ದೇವೇಗೌಡರು ಸೋತಿರುವುದರಿಂದ ತುಂಬಾ ನೋವುಂಟಾಗಿದೆ. ಹಾಸನದಲ್ಲಿ ತಾವು ಗೆದ್ದಿರುವುದಕ್ಕೆ ಸಂತೋಷವಾಗಿರುವುದಕ್ಕೆ ಉಳಿದೆಡೆ ಜೆಡಿಎಸ್ ಸೋತಿರುವುದಕ್ಕೆ ದುಃಖವಾಗಿದೆ. ಹಾಸನ ಜಿಲ್ಲೆ ಜನರು ತಮ್ಮನ್ನು ಚುನಾಯಿಸಿರುವುದಕ್ಕೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಹಾಗೆಯೇ ಕಾಂಗ್ರೆಸ್-ಜೆಡಿಎಸ್ ಪಕ್ಷದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.  ತಾವು ಗಳಿಸಿರುವ ಗೆಲುವು ತಮ್ಮದಲ್ಲ, ಅದು ಜಿಲ್ಲೆಯ ಜನರ ಹಾಗೂ ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಹೋರಾಟ ಮಾಡುವ ಮೂಲಕ ಗೆಲುವು ತಂದುಕೊಟ್ಟಿದ್ದಾರೆ.

ಇದು ಕಾರ್ಯಕರ್ತರು ಹಾಗೂ ದೇವೇಗೌಡರ ಗೆಲುವಾಗಿದೆ. ಹೋರಾಟವನ್ನೇ ಜೀವನವನ್ನಾಗಿಸಿಕೊಂಡಿರುವ ದೇವೇಗೌಡರು ಸೋತಿರುವುದಕ್ಕೆ ದುಃಖವಾಗಿದೆ. ತುಮಕೂರಿಗೆ ಹೇಮಾವತಿ ನೀರು ಕೊಟ್ಟಿದ್ದು, ದೇವೇಗೌಡರು.

ಆದರೆ ಅಪಪ್ರಚಾರ ಮಾಡಲಾಯಿತು. ತುಮಕೂರಿನಲ್ಲಿ ದೇವೇಗೌಡರ ಪರವಾಗಿ ಚುನಾವಣೆಯಲ್ಲಿ ಶ್ರಮಿಸಿದ ಎರಡೂ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin