ಆತ್ಮನಿರ್ಭರ ಯೊಜನೆಯಡಿ ಕಲ್ಲಿದ್ದಲು ಉತ್ಪಾದನೆ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜು.8- ಜಗತ್ತಿನಲ್ಲಿ ಅತಿ ಹೆಚ್ಚು ಕಲ್ಲಿದ್ದಲು ನಿಕ್ಷೇಪ ಹೊಂದಿರುವ ದೇಶಗಳ ಸಾಲಿನಲ್ಲಿ ಭಾರತ ನಾಲ್ಕನೆ ಸ್ಥಾನದಲ್ಲಿದ್ದರೂ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತಿರುವುದು ಅಕ್ಷಮ್ಯ. ಹಾಗಾಗಿ, ಆತ್ಮನಿರ್ಭರ ಯೊಜನೆಯಡಿ ಭಾರತದಲ್ಲಿ ಹೆಚ್ಚು ಕಲ್ಲಿದ್ದಲು ಉತ್ಪಾದಿಸುವ ಯೊಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಹಾಗೂ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಷಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಸದ್ಯ 30 ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಸಂಗ್ರಹವಿದೆ. 2023ರೊಳಗೆ ದೇಶದಲ್ಲಿ 1 ಸಾವಿರ ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದಿಸುವ ಗುರಿ ಹೊಂದಲಾಗಿದೆ. ಮೂರ್ನಾಲ್ಕು ವರ್ಷಗಳಲ್ಲಿ ಯಶಸ್ವಿಯಾಗುವ ಭರವಸೆ ಇದೆ ಎಂದರು.

ವಾಣಿಜ್ಯೀಕರಣದಿಂದ ಸಮಸ್ಯೆಯಾಗುತ್ತಿದೆ ಎಂದು ಕೋಲ್ ಇಂಡಿಯಾ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಲಾಗುತ್ತದೆ. ಈ ವರ್ಷ ಕೋಲ್ ಇಂಡಿಯಾ ಉತ್ಪಾದಿಸಿದ್ದು, 606 ಮಿಲಿಯನ್ ಟನ್ ಕಲ್ಲಿದ್ದಲು ಮಾತ್ರ. ಉಳಿದದ್ದನ್ನು ವಿದೇಶದಿಂದ ತರಿಸಲಾಗಿದೆ. ಹಾಗಾಗಿ, ಕೊಲ್ ಇಂಡಿಯಾ ಹೊರತುಪಡಿಸಿ ಉಳಿದಿದ್ದನ್ನು ಮಾತ್ರ ವಾಣಿಜ್ಯಿಕರಿಸಲಾಗುತ್ತಿದೆ ಎಂದರು.

# ಖಾಸಗಿ ವೈದ್ಯರು ದೇಶಕ್ಕಾಗಿ ಸೇವೆ ಮಾಡಬೇಕು:
ಸಾಮಾನ್ಯ ದಿನಗಳಲ್ಲಿ ಕೆಲ ಖಾಸಗಿ ವೈದ್ಯರು, ಆಸ್ಪತ್ರೆಯವರು ರೋಗಿಗಳಿಗೆ ಚಿಕಿತ್ಸೆ ಕೊಟ್ಟು ಲಾಭ ಗಳಿಸುತ್ತಾರೆ. ಕಷ್ಟದ ಸಮಯದಲ್ಲಿ ಹಿಂಜರಿಯದೇ ದೇಶ ಮತ್ತು ಸಮಾಜದ ಜತೆಗೆ ನಿಲ್ಲಬೇಕು. ಪಿಪಿಇ ಕಿಟ್ ಧರಿಸಿ ಧೈರ್ಯದಿಂದ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು ಎಂದು ಪ್ರಹ್ಲಾದ್ ಜೋಷಿ ಮನವಿ ಮಾಡಿದರು.

ಕಾನೂನಿನ ಮೂಲಕ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಮೊದಲು ಪಿಪಿಇ ಕಿಟ್ ಸಮಸ್ಯೆ ಇತ್ತು. ಈಗ ವಿದೇಶಗಳಿಗೆ ಕೊಡುವಷ್ಟು ಪಿಪಿಇ ಕಿಟ್ ನಮ್ಮಲ್ಲಿ ಉತ್ಪಾದನೆಯಾಗುತ್ತಿವೆ. ಸಂಕಷ್ಟದ ಸಮಯದಲ್ಲಿ ಕೈಚೆಲ್ಲುವುದು ಸರಿಯಲ್ಲ. ಇದು ವೈದ್ಯಕೀಯ ಕ್ಷೆತ್ರಕ್ಕೆ ಮತ್ತು ಸಮಾಜಕ್ಕೆ ಒಳ್ಳೆಯದಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಪ್ರತ್ಯೆಕ ಹಾಸಿಗೆ ಮತ್ತಿತರ ವ್ಯವಸ್ಥೆ ಕಲ್ಪಿಸಬೇಕು ಎಂದರು.

ಲಸಿಕೆಗಾಗಿ ಕೇಂದ್ರದಿಂದ ಪ್ರಯತ್ನ ನಡೆದಿದೆ: ಕೊರೊನಾ ಸೋಂಕು ನಿವಾರಣೆಗಾಗಿ ಲಸಿಕೆ ಕಂಡು ಹಿಡಿಯುವ ಕಾರ್ಯ ಭರದಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೊದಿ ಅವರ ಪ್ರೇರಣೆಯಿಂದ ವಿಜ್ಞಾನಿಗಳ ತಂಡ ಸತತ ಪ್ರಯತ್ನದಲ್ಲಿದೆ.

ಆ.15ರೊಳಗೆ ಲಸಿಕೆ ಬಿಡುಗಡೆ ಮಾಡುವ ಯಾವುದೇ ಅಧಿಕೃತ ತೀರ್ಮಾನ ಆಗಿಲ್ಲ. ಆದರೆ, ಉತ್ತಮ ಪ್ರಯತ್ನ ನಡೆದಿದೆ. ಆಯುರ್ವೇದದಲ್ಲಿ ಚಿಕಿತ್ಸೆ ಪಡೆದವರು ಗುಣವಾಗುತ್ತಿರುವುದು ಉತ್ತಮ ಬೆಳವಣಿಗೆ. ಐಸಿಎಂಆರ್ ಅನುಮೋದಿಸಿದ ಆಯುರ್ವೇದ ಔಷಧದ ಪ್ರಯೊಗ ನಡೆದಿದೆ ಎಂದು ಜೋಷಿ ಹೇಳಿದರು.

Facebook Comments