“ಸಿಡಿ ಬೆದರಿಕೆ ಸರಿಯಲ್ಲ” : ಪ್ರಹ್ಲಾದ್ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಜ.16- ಸಿಡಿ ವಿಚಾರ ಇಟ್ಟುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೆದರಿಸುವುದು ಸರಿಯಲ್ಲ. ಅವರಲ್ಲಿ ಸಿಡಿ ಇಲ್ಲ. ಸುಖಾಸುಮ್ಮನೆ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸಚಿವ ಸ್ಥಾನ ಸಿಗದೆ ಇರುವವರು ತಮ್ಮ ಅಭಿಪ್ರಾಯವನ್ನು ಪಕ್ಷದ ಉಸ್ತುವಾರಿ, ಹೈಕಮಾಂಡ್ ಜತೆ ಚರ್ಚಿಸಿ ಬಗೆಹರಿಸಿಕೊಳ್ಳಬಹುದು. ಇದನ್ನು ಸಿಎಂ ಕೂಡ ಸ್ಪಷ್ಟಪಡಿಸಿದ್ದಾರೆ ಎಂದರು.

ಸಿಡಿ ಎಂಬುದು ಇಲ್ಲವೇ ಇಲ್ಲ. ಇರುವುದು ನಿಜವೇ ಆದರೆ ಅದನ್ನು ಇಟ್ಟುಕೊಂಡು ಬೆದರಿಸುವ ತಂತ್ರ ಯಾಕೆ? ಧೈರ್ಯವಿದ್ದರೆ ಸಿಡಿ ಬಿಡುಗಡೆ ಮಾಡಿ. ಸಿಡಿ ಕೊಡಿ ಎಂದು ಮುಖ್ಯಮಂತ್ರಿ ಕೂಡ ಇಷ್ಟು ಧೈರ್ಯದಿಂದ ಹೇಳಿದ್ದಾರೆ ಅಂದರೆ ಸಿಡಿ ಬಗ್ಗೆ ಹೇಳುವವರಲ್ಲಿ ಸಿಡಿ ಇಲ್ಲವೇ ಇಲ್ಲ. ರಾಜಕಾರಣ ದಲ್ಲಿ ನಾಯಕರಿಗೆ ಮಹತ್ವಾಕಾಂಕ್ಷೆ ಇರುವುದು ತಪ್ಪಲ್ಲ. ಆದರೆ ಬಹಿರಂಗವಾಗಿ ಹೇಳಿಕೆ ನೀಡೊದು ತಪ್ಪು ಎಂದು ಜೋಶಿ ಹೇಳಿದರು.

ಸರ್ಕಾರ ಸಾಲ ಪಡೆದು ಹಣ ಕೊಡಲಿ: ಭಾರತ ಸರ್ಕಾರ ತನ್ನ ಪಾಲಿನ 435 ಕೋಟಿ ಕೊಡುತ್ತದೆ. ಇದನ್ನು ಇನ್ನೂ ಹೆಚ್ಚಿಸುತ್ತದೆ. ಸಿಆರ್‍ಎಫ್ ಫಂಡ್ ಬಿಡುಗಡೆ ತಡವಾಗುತ್ತದೆ ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರಗಳು ಪ್ರಸ್ತಾವನೆ ಸಲ್ಲಿಸುವುದಿಲ್ಲ.ರಾಜ್ಯ ಸರಕಾರ ವಿಶ್ವ ಬ್ಯಾಂಕ್ ನಲ್ಲಿ 3-4 ಸಾವಿರ ಕೋಟಿ ಸಾಲ ಪಡೆದು ರಸ್ತೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು. ನಂತರ ಕೇಂದ್ರ ಸರ್ಕಾರ ಹಣ ಕೊಟ್ಟೆ ಕೊಡುತ್ತದೆ.

ಮಂಜೂರು ಮಾಡಿಸಿಕೊಡುವ ಜವಾಬ್ದಾರಿ ನಮ್ಮದು. ಕೇಂದ್ರ ಬಿಡುಗಡೆ ಮಾಡಿದ ತಕ್ಷಣಆ ಹಣವನ್ನು ಸಾಲ ಮರು ಪಾವತಿ ಮಾಡಬಹುದಾಗಿದೆ. ಬಹಳಷ್ಟು ರಾಜ್ಯ ಸರಕಾರಗಳು ಹೀಗೆ ಮಾಡುತ್ತಿವೆ. ನಮ್ಮ ರಾಜ್ಯದಲ್ಲಿ ಸಿಎಂ ಜತೆ ಚರ್ಚೆ ಮಾಡಿದ್ದು, ಪ್ರಸ್ತಾವನೆ ಸಲ್ಲಿಸುವುದಾಗಿ ಹೇಳಿದ್ದಾರೆ ಎಂದು ಈ ವೇಳೆ ಜೋಶಿ ಹೇಳಿದ್ದಾರೆ.

Facebook Comments