2023ರವರೆಗೂ ಸಿಎಂ ಬದಲಾವಣೆ ಇಲ್ಲ : ಪ್ರಹ್ಲಾದ್ ಜೋಶಿ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ,ಡಿ.5- ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಬಗ್ಗೆ ಯಾವುದೇ ಪ್ರಸ್ತಾವನೆ ಹೈಕಮಾಂಡ್ ಮುಂದೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದ ಖಾಸಗಿ ಹೊಟೆಲ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ಕುರಿತು ಗ್ರಾಮೀಣ ಅಭಿವೃದ್ಧಿ ಸಚಿವ ಈಶ್ವರಪ್ಪ ಅವರು ಕೂಡಾ ಈಗಾಗಲೇ ಸ್ಪಷ್ಟೀಕರಣ ನೀಡಿದ್ದಾರೆ.

ಈ ರೀತಿಯ ಹೇಳಿಕೆಗಳನ್ನು ನೀಡಬಾರದೆಂದು ರಾಷ್ಟ್ರ ನಾಯಕರು ರಾಜ್ಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ. ಆ ರೀತಿ ಹೇಳಿಕೆ ನೀಡುವುದು ತಪ್ಪು. ಮುಂದಿನ 2023ರ ಚುನಾವಣೆವರೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ವಿಷಯ ನನ್ನ ಗಮನಕ್ಕೆ ಇಲ್ಲ, ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳನ್ನು ನಾನು ಗಮನಿಸಿಲ್ಲ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯಾಗಿಲ್ಲ ಎಂದು ಗೊತ್ತಾಗಿದೆ. ಆದರೆ ಹಾಸನದಲ್ಲಿ ಐಐಟಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳ ಬಗ್ಗೆ ದೇವೇಗೌಡರು ಪ್ರಧಾನಿ ಜೊತೆ ಮಾತನಾಡಿದ್ದಾರೆ ಎಂದರು.

40% ಪರ್ಸೆಂಟ್ ಆರೋಪ ಆಧಾರ ರಹಿತವಾಗಿದ್ದು, ಈ ಬಗ್ಗೆ ದಾಖಲೆಗಳಿದ್ದರೆ ಎಸಿಬಿ ಅಥವಾ ತನಿಖಾ ಸಂಸ್ಥೆಗಳಿಗೆ ದೂರು ನೀಡಲಿ ಎಂದು ಸವಾಲ್ ಹಾಕಿ, ಮೋದಿ ಅವರು ಈ ಹಿಂದೆ ಕಾಂಗ್ರೆಸ್ ವಿರೋಧ ಆರೋಪ ಮಾಡಿದಾಗ ಆಧಾರವಿದ್ದವು ಎಂದು ಸಮರ್ಥಿಸಿಕೊಂಡರು.

# ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ :
ರಾಜ್ಯಾದ್ಯಂತ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಸಲಿದೆ ಎಂದು ಜೋಶಿ ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಸಾಕಷ್ಟು ಬದಲಾವಣೆ ತಂದಿದ್ದೇವೆ. 2021 ರ ಬಜೆಟ್ ನಲ್ಲಿ ಗ್ರಾಮೀಣ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡಿದ್ದು, ನರೇಗಾ, ಜಲಜೀವನ ಮಿಷನ್, ಪ್ರಧಾನಮಂತ್ರಿ ಆವಾಸ್ ಸೇರಿದಂತೆ ಹಲವಾರು ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಎಂದರು.

ಜಲಜೀವನ ಮಿಶನ್ ಯೋಜನೆಯಡಿ ಧಾರವಾಡದ 388 ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ನೀರು ಪೂರೈಕೆ ಮಾಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಮನೆಮನೆಗೆ ನಲ್ಲಿ ನೀರು ಪೂರೈಸುವ ಯೋಜನೆ ಪೂರ್ಣಗೊಳಲಿದೆ. ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್ ಭಾರೀ ಮತಗಳ ಅಂತರದಿಂದ ಗೆಲುವು ಸಾಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ, ಹಾಲಿ ಶಾಸಕ ಜಗದೀಶ್ ಶೆಟ್ಟರ್ ಮಾತನಾಡಿ, ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಗದಗ, ಹಾವೇರಿ, ಧಾರವಾಡ ಜಿಲ್ಲೆಗಳಲ್ಲಿ ಪ್ರದೀಪ್ ಶೆಟ್ಟರ್‍ಗೆ ಭಾರೀ ಬೆಂಬಲ ವ್ಯಕ್ತವಾಗಿದೆ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಬಸವರಾಜ ಕುಂದಗೋಳಮಠ, ಮಾಂತೇಶ ಶಾಗೋಟಿ, ತಿಪ್ಪಣ್ಣ ಮಜ್ಜಗಿ, ವಿಜಯಾನಂದ ಶೆಟ್ಟರ್ ಇದ್ದರು.

Facebook Comments