ಬೋಸ್ನಿಯಾದಲ್ಲಿ ಖ್ಯಾತ ಉದ್ಯಮಿ ಪ್ರಮೋದ್ ಮಿತ್ತಲ್ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಸರಜೆವೋ, ಜು.24 (ಪಿಟಿಐ)- ಲಕ್ಷಾಂತರ ಡಾಲರ್ ವಂಚನೆ ಮತ್ತು ಅಧಿಕಾರ ದುರುಪಯೋಗ ಆರೋಪಗಳ ಸಂಬಂಧ ಭಾರತದ ಖ್ಯಾತ ಉದ್ಯಮಿ ಪ್ರಮೋದ್ ಮಿತ್ತಲ್ ಅವರನ್ನು ಬೋಸ್ನಿಯಾದಲ್ಲಿ ಬಂಧಿಸಲಾಗಿದೆ. ಪ್ರಮೋದ್, ಪ್ರಸಿದ್ದ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಕಿರಿಯ ಸಹೋದರ.

ಇದೇ ಪ್ರಕರಣಗಳ ಸಂಬಂಧ ಮಿತ್ತಲ್ ಅವರ ಗ್ಲೋಬಲ್ ಸ್ಟೀಲ್ ಹೋಲ್ಡಿಂಗ್ಸ್ ಮತ್ತು ಸ್ಥಳೀಯ ಸಾರ್ವಜನಿಕ ಸಂಸ್ಥೆಯ ಹಿರಿಯ ಅಧಿಕಾರಿ ಪರಮೇಶ್ ಭಟ್ಟಾಚಾರ್ಯ ಮತ್ತು ಇನ್ನು ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಮೋದ್ ಮಿತ್ತಲ್ ಬೋಸ್ನಿಯಾದ ಈಶಾನ್ಯ ಪಟ್ಟಣ ಲುಕವ್ಯಾಕ್‍ನಲ್ಲಿ ಗೋಕಿಲ್ ಎಂಬ ಕೋಕ್ ಘಟಕವನ್ನು 2003ರಲ್ಲಿ ಸ್ಥಾಪಿಸಿದ್ದರು. ಅಲ್ಲಿ 1,000ಕ್ಕೂ ಹೆಚ್ಚು ಮಂದಿ ಕಾರ್ಯನಿರ್ವಹಿಸುತ್ತಾರೆ.  ವಂಚನೆ ಮತ್ತು ಅಧಿಕಾರ ದುರುಪಯೋಗ ಆರೋಪಗಳ ಮೇಲೆ ಸರ್ಕಾರಿ ಅಭಿಯೋಜಕರ (ಪ್ರಾಸಿಕ್ಯೂಟರ್) ಆದೇಶದ ಮೇಲೆ ಪೊಲೀಸರು ಮಿತ್ತಲ್ ಮತ್ತು ಇತರ ಮೂವರನ್ನು ಬಂಧಿಸಿದ್ದಾರೆ ಎಂದು ನ್ಯಾಯಾಂಗ ಅಧಿಕಾರಿ ಕಾಜಿಂ ಸೆರ್‍ಹ್ಯಾಟ್ಲಿಕ್ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಸಂಘಟಿತ ಅಪರಾಧ, 2.9 ದಶಲಕ್ಷ ಡಾಲರ್ ವಂಚನೆ ಸೇರಿದಂತೆ ಆರ್ಥಿಕ ಅಪರಾದಗಳು ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳ ವಿರುದ್ಧ ದೂರುಗಳು ದಾಖಲಿಸಲಾಗಿದೆ. ಇವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗಿದೆ. ಆಪಾದನೆಗಳು ಸಾಬೀತಾದರೆ 45 ವರ್ಷಗಳವರೆಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments