ದತ್ತಪೀಠ ಮುಕ್ತಿಗಾಗಿ ಯವುದೇ ಬಲಿದಾನಕ್ಕೂ ಸಿದ್ದ : ಪ್ರಮೋದ್ ಮುತಾಲಿಕ್

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು,ಅ.13- ಶ್ರೀರಾಮನಸೇನೆ ವತಿಯಿಂದ 14ನೇ ವರ್ಷದ ದತ್ತಮಾಲ ಅಭಿಯಾನ ಬಿಗಿ ಪೊಲೀಸ್ ಬಂದೋಬಸ್ತ್‍ನಲ್ಲಿ ಮುಕ್ತಾಯಗೊಂಡಿತು. ನಗರದ ಶಂಕರಮಠದ ಮುಂಭಾಗ ನಿರ್ಮಿಸಿದ್ದ ವೇದಿಕೆಯಲ್ಲಿ ಧಾರ್ಮಿಕ ಸಭೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ,ಕಳೆದ 25 ವರ್ಷಗಳಿಂದ ನಾವು ದತ್ತಪೀಠ ಮುಕ್ತಿಗಾಗಿ ನಾವು ಹೋರಾಟ ಮಾಡುತ್ತಿದ್ದು ಯವುದೇ ಬಲಿದಾನಕ್ಕೂ ಸಿದ್ದರಿದ್ದೇವೆ ಎಂದು ಹೇಳಿದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದ ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಜಾರಿಗೆ ತರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.  ಇಸ್ಲಾಮಿಕ್ ಭಯೋತ್ಪಾದಕರು ನಮ್ಮ ದಾರಿಗೆ ಅಡ್ಡಬಂದಲ್ಲಿ ಅವರನ್ನು ಎದುರಿಸಲಾಗುವುದು.ಅಯೋಧ್ಯೆ ರಾಮಮಂದಿರ ನಿರ್ಮಾಣದಲ್ಲಿ ಗುರಿ ಮುಟ್ಟಲಿದ್ದೇವೆ. ಡಿಸೆಂಬರ್ 6ರೊಳಗೆ ನಮ್ಮ ಪರ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪುನನ್ ಕಾಶ್ಮೀರ ಸಂಘಟನೆ ಸಂಚಾಲಕ ರಾಹುಲ್ ಕೌರ್ ಶ್ರೀರಾಮಸೇನೆಯ ರಾಜ್ಯ ಕಾಯಾಧ್ಯಕ್ಷ ಗಂಗಾಧರ್ ಕುಲಕಣಿ, ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಧಾರ್ಮಿಕ ಸಭೆ ನಂತರ ಬಸವನಹಳ್ಳಿ ಮುಖ್ಯರಸ್ತೆ ಮುಖಾಂತರ ಎಂಜಿರಸ್ತೆಯಿಂದ ಅಜಾದ್ ಪಾರ್ಕ್‍ವರೆಗೆ ಶೋಭಾಯಾತ್ರೆ ನೆಡಯಿತು. ಶೋಭಾ ಯಾತ್ರೆಯಲ್ಲಿ ನೂರಾರು ದತ್ತ ಮಾಲಾಧಾರಿಗಳು ಭಜನೆ ಮಾಡುತ್ತಾ ಜೈಕಾರ ಹಾಕಿದರು. ನಂತರ ಅಲ್ಲಿಂದ ರಾಜ್ಯದ ಬೆಂಗಳೂರು, ಮಂಗಳೂರು, ಉಡುಪಿ , ಬಾಗಲಕೋಟೆ, ಹುಬ್ಬಳ್ಳಿ, ದಾವಣಗೆರೆ ಮತ್ತಿತರೆಡೆಗಳಿಂದ ಬಂದಿದ್ದ ದತ್ತ ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದರು.

ಮಾರ್ಗಮಧ್ಯೆ ಸಿಗುವ ಹೊನ್ನಮ್ಮಹಳ್ಳದಲ್ಲಿ ಮಿಂದು ಅಲ್ಲಿಂದ ಜಿಲ್ಲಾಡಳಿತ ನಿರ್ಮಿಸಿರುವ ಬ್ಯಾರಿಕೇಡ್ ಮುಖಾಂತರ ಸರತಿಸಾಲಿನಲ್ಲಿ ನಿಂತು ಗುಹೆ ಪ್ರವೇಶಿಸಿ ತಾವು ತಂದಿದ್ದ ಇರುಮುಡಿ ಸಮರ್ಪಿಸಿ ದತ್ತ ಪಾದುಕೆಗಳ ದರ್ಶನ ಪಡೆದರು. ಜಿಲ್ಲಾಡಳಿತ ದತ್ತಗುಹೆಯಿಂದ 100 ಮೀಟರ್ ದೂರದಲ್ಲಿ ನಿರ್ಮಿಸಿದ್ದ ಶೆಡ್‍ನಲ್ಲಿ ವಿವಿಧ ಮಠಾಧೀಶರು ಅರ್ಚಕರ ನೇತೃತ್ವದಲ್ಲಿ ಹೋಮಹವನ ನಡೆದವು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ನೇತೃತ್ವದಲ್ಲಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.

ಭಕ್ತರೊಬ್ಬರು ತಂದಿದ್ದ ದತ್ತಾತ್ರೇಯ ವಿಗ್ರಹವನ್ನು ನೀಡಿದ್ದು, ಅದನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲು ತಹಸೀಲ್ದಾರ್ ನಂದಕುಮಾರ್ ನಿರಾಕರಿಸಿದ ಹಿನ್ನೆಲೆಯಲ್ಲಿ ಪೊಲೀಸರು ದತ್ತಮಾಲಧಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.  ಮೆರವಣಿಗೆಯಲ್ಲಿ ವಿಗ್ರಹ ಕೊಂಡೊಯ್ಯಲು ನಿರಾಕರಿಸಿರುವುದಕ್ಕೆ ಪ್ರಮೋದ್ ಮುತಾಲಿಕ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Facebook Comments