ರಾಜಕೀಯ ಮುತ್ಸದ್ದಿ, ಮಾಜಿ ರಾಷ್ಟ್ರಪತಿ ಪ್ರಣಬ್‍ಗೆ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.1- ನಿನ್ನೆ ನಿಧನರಾದ ಭಾರತ ರತ್ನ, ದೇಶದ ಮೇಧಾವಿ ರಾಜಕಾರಣಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ ದೆಹಲಿಯ ಲೋದಿಗಾರ್ಡ್‍ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು.

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್‍ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ, ಮಾಜಿ ಪ್ರಧಾನಿ ಮನಮೋಹನ್‍ಸಿಂಗ್, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್, ವಿವಿಧ ಸೇನಾ ಪಡೆಯ ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅಗಲಿದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಅಂತಿಮ ವಿದಾಯ ಹೇಳಿದರು.

ಇಂದು ಮಧ್ಯಾಹ್ನ 3 ಗಂಟೆ ವೇಳೆಗೆ ದೆಹಲಿಯ ಲೋಧಿ ಗಾರ್ಡನ್‍ನಲ್ಲಿ ಪ್ರಣಬ್ ಅವರ ಇಬ್ಬರು ಪುತ್ರರು, ಓರ್ವ ಪುತ್ರಿ, ಕುಟುಂಬದ ಸದಸ್ಯರು, ಅವರ ಆಪ್ತರು, ಬಂಧು-ಬಳಗದವರು ಪಕ್ಷಾತೀತವಾಗಿ ಮುಖಂಡರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಭಾವಪೂರ್ಣ ವಿದಾಯ ಹೇಳಿದರು. ಅವರ ಹಿರಿಯ ಪುತ್ರ ಅಭಿಜಿತ್ ಪ್ರಣಬ್ ಮುಖರ್ಜಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು.

ಕೋವಿಡ್ ಶಿಷ್ಟಾಚಾರದ ಹಿನ್ನೆಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ನಿನ್ನೆಯೇ ದೆಹಲಿಯ ಅವರ ನಿವಾಸಕ್ಕೆ ತೆರಳಿ ಗಣ್ಯರು ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಇಂದು ಬೆಳಗ್ಗೆ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಲೋದಿಯಾ ಗಾರ್ಡನ್‍ಗೆ ತಂದು ಸೇನಾ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕೊರೊನಾ ಶಿಷ್ಟಾಚಾರದ ಕಾರಣ ಸೀಮಿತ ಜನ ಪಾಲ್ಗೊಳ್ಳುವ ಮೂಲಕ ಅಂತ್ಯಸಂಸ್ಕಾರ ನೆರವೇರಿತು.  ಕಳೆದ 21 ದಿನಗಳಿಂದ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ದೇಶದ ಹಿರಿಯ ರಾಜಕೀಯ ಮುತ್ಸದ್ಧಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಿನ್ನೆ ಹೃದಯಾಘಾತದಿಂದ ನಿಧನರಾಗಿದ್ದು, ಸರ್ಕಾರ ಏಳು ದಿನಗಳ ಕಾಲ ಶೋಕಾಚರಣೆ ಘೋಷಿಸಿದೆ.

ಪ್ರಣಬ್ ಅವರ ನಿಧನಕ್ಕೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಎಲ್ಲ ಪಕ್ಷಗಳ ರಾಜಕೀಯ ಮುಖಂಡರು, ರಾಜಕೀಯೇತರ ಸಂಘಟನೆಗಳ ಮುಖಂಡರು, ವಿವಿಧ ಕ್ಷೇತ್ರಗಳ ಗಣ್ಯರು, ಆರ್ಥಿಕ ತಜ್ಞರು, ಕೈಗಾರಿಕಾ ಕ್ಷೇತ್ರಗಳ ತಜ್ಞರು, ಉದ್ಯಮಿಗಳು ಸೇರಿದಂತೆ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ.

Facebook Comments