ನ್ಯಾಯಾಂಗ ನಿಂದನೆ: ಪ್ರಶಾಂತ್ ಭೂಷಣ್‌ಗೆ 1 ರೂ. ದಂಡ ವಿಧಿಸಿದ ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಆ.31- ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂಕೋರ್ಟ್ 1ರೂ. ದಂಡ ವಿಧಿಸಿದ್ದು, ದಂಡ ಕಟ್ಟಲು ತಪ್ಪಿದರೆ ಮೂರು ತಿಂಗಳ ಜೈಲು ಶಿಕ್ಷೆ ಹಾಗೂ ಮೂರು ವರ್ಷದವರೆಗೆ ವಕೀಲಿಕೆ ಮಾಡುವುದಕ್ಕೆ ನಿಷೇಧ ಹೇರುವ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಅರುಣ್ ಮಿಶ್ರ, ಬಿ.ಆರ್.ಗವಾಯಿ ಹಾಗೂ ಕೃಷ್ಣ ಮುರಾರಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ನಡೆಸಿದ ವಿಚಾರಣೆಯ ತೀರ್ಪನ್ನು ಇಂದು ಪ್ರಕಟಿಸಿದರು.
ನ್ಯಾಯಾಂಗದ ಬಗ್ಗೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಮಾಡಿದ ಎರಡು ಟ್ವೀಟ್‍ಗಳನ್ನು ಆಧರಿಸಿ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದು, ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗಿದೆ.

ಪ್ರಕರಣದಲ್ಲಿ ದೋಷಿಯಾಗಿರುವ ಪ್ರಶಾಂತ್ ಭೂಷಣ್ ಅವರು ತಮ್ಮ ತಪ್ಪಿಗಾಗಿ ಸೆ.15ರೊಳಗೆ ಒಂದು ರೂ. ದಂಡ ಕಟ್ಟಬೇಕು. ಇಲ್ಲದಿದ್ದರೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಬಹುದು ಹಾಗೂ ಮೂರು ವರ್ಷಗಳವರೆಗೆ ವಕೀಲುಗಾರಿಕೆಯನ್ನು ನಿಷೇಧಿಸಬಹುದು ಎಂದು ಪೀಠ ಹೇಳಿದೆ.

ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ನ್ಯಾಯಾಲಯವು ಭೂಷಣ್ ಅವರಿಗೆ ಎಚ್ಚರಿಕೆ ನೀಡಿ ಶಿಕ್ಷೆ ವಿಧಿಸುವುದನ್ನು ಕೈಬಿಡಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರು, ಸೆರೆವಾಸದ ಶಿಕ್ಷೆ ನೀಡುವ ಮೂಲಕ ಭೂಷಣ್ ಅವರನ್ನು ಹುತಾತ್ಮರನ್ನಾಗಿಸಬಾರದು ಎಂದು ಮನವಿ ಮಾಡಿದ್ದರು.

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿಯ ಕ್ಷಮೆಯಾಚನೆಗೆ ನಾವು ಸಾಕಷ್ಟು ಅವಕಾಶಗಳನ್ನು ನೀಡಿದೆವು. ಆದರೆ ಪ್ರಶಾಂತ್ ಭೂಷಣ್ ಘಟನೆಗಳಿಗೆ ಹೆಚ್ಚು ಪ್ರಚಾರ ನೀಡಿದರು ಎಂದು ಪೀಠ ಹೇಳಿದೆ.  ನ್ಯಾಯಮೂರ್ತಿ ಅರುಣ್ ಮಿಶ್ರ ಅವರು, ಇಂಧನ ಪ್ರಕರಣದ ದೋಷಿಯ ಕ್ಷಮೆಯಾಚನೆಗೆ ನಾವು ಅವಕಾಶಗಳನ್ನು ನೀಡಿದೆವು. ಅಟಾರ್ನಿ ಜನರಲ್ ಕೂಡ ದೋಷಿಯು ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ತಿಳಿಸಿದರು. ಆದರೆ ದೋಷಿ ಘಟನೆಗಳಿಗೆ ಹೆಚ್ಚು ಪ್ರಚಾರ ನೀಡಿದರು ಎಂದು ಹೇಳುವ ಮೂಲಕ ತಮ್ಮ ತೀರ್ಪು ಪ್ರಕಟಿಸಿದ್ದಾರೆ.

ಪ್ರಶಾಂತ್ ಭೂಷಣ್ ಅವರನ್ನು ಆ.14ರಂದು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನ್ಯಾಯಾಲಯವು ದೋಷಿ ಎಂದು ಘೋಷಿಸಿತ್ತು. ಆ.25ರಂದು ಕ್ಷಮೆಯಾಚನೆಗೆ ಸೂಚಿಸಿತ್ತು. ಕ್ಷಮೆ ಕೋರಲು ನಿರಾಕರಿಸಿದ್ದರಿಂದ ಶಿಕ್ಷೆಯ ಪ್ರಮಾಣದ ತೀರ್ಪನ್ನು ಆ.31ಕ್ಕೆ ಕಾಯ್ದಿರಿಸಿತ್ತು.

Facebook Comments