ಜಮೀರ್ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸುತ್ತೇನೆ : ಪ್ರಶಾಂತ್ ಸಂಬರಗಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.12- ಶಾಸಕ ಜಮೀರ್ ಅಹಮದ್ ಅವರ ಆಸ್ತಿಯನ್ನು ಸರ್ಕಾರಕ್ಕೆ ಕೊಡಿಸಿ, ಬೊಕ್ಕಸಕ್ಕೆ ಆದಾಯ ತಂದು ಕೊಡುತ್ತೇನೆ ಎಂದು ಸಾಮಾಜಿಕ ಹೊರಾಟಗಾರ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.

ತಮಗೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಕಚೇರಿಗೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು. ಶ್ರೀಲಂಕಾದ ಕೊಲಂಬೋದ ಕ್ಯಾಸಿನೋಗೆ ನಾನು ನಟಿ ಸಂಜನಾ ಅವರನ್ನು ಕರೆದುಕೊಂಡು ಹೋಗಿರುವುದನ್ನು ಸಾಬೀತುಪಡಿಸಿದರೆ ನನ್ನ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವುದಾಗಿ ಶಾಸಕ ಜಮೀರ್ ಅಹಮದ್ ನಿನ್ನೆ ಸವಾಲು ಹಾಕಿದ್ದರು.

ಅದಕ್ಕೆ ಇಂದು ಪ್ರತ್ಯುತ್ತರ ನೀಡಿರುವ ಪ್ರಶಾಂತ್ ಸಂಬರಗಿ, ಜಮೀರ್ ಅವರ ಆಸ್ತಿಯನ್ನು ಸರ್ಕಾರಕ್ಕೆ ನಾನು ಕೊಡಿಸುತ್ತೇನೆ. ಹೊಸ ಆದಾಯವನ್ನು ತಂದು ಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

2019ರ ಜೂನ್ 8, 9 ಹಾಗೂ 10ರಂದು ಜಮೀರ್ ಅಹಮದ್ ಖಾನ್ ಎಲ್ಲಿದ್ದರು ಎಂಬುದನ್ನು ಹೇಳಬೇಕು. ಅವರು ಕ್ಯಾಸಿನೋಗೆ ಹೋಗಿದ್ದರೆ, ಇಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು. ನಾನು ಇಂದು ಪೈಲ್‍ನಲ್ಲಿ ತಂದಿರುವ ದಾಖಲೆಯಲ್ಲಿ ಜಮೀರ್ ಅಹಮದ್ ಕ್ಯಾಸಿನೋದಲ್ಲಿ ಭಾಗವಹಿಸಿರುವುದಕ್ಕೆ ಪುರಾವೆಗಳಿವೆ. ಅದನ್ನು ಸಿಸಿಬಿಯವರಿಗೆ ಕೊಡುತ್ತಿದ್ದೇನೆ. ಸತ್ಯದ ದೀಪ ಬೆಳಗುತ್ತಿದ್ದೇನೆ ಎಂದು ಹೇಳಿದ್ದಾರೆ.

Facebook Comments