ಕೇಂದ್ರ ಸಚಿವ ಪ್ರತಾಪ್ ಸಾರಂಗಿಗೂ ಕೊರೊನಾ ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.7- ಗಣ್ಯಾತಿಗಣ್ಯರು ಮತ್ತು ಮಂತ್ರಿ ಮಹೋದಯರಿಗೂ ಉಪಟಳ ನೀಡುತ್ತಿರುವ ಡೆಡ್ಲಿ ಕೊರೊನಾ ಸೋಂಕು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಪ್ರತಾಪ್ ಸಾರಂಗಿ ಅವರಿಗೂ ತಗುಲಿದೆ ಎಂದು ಮೂಲಗಳು ಹೇಳುತ್ತಿವೆ.

ಪ್ರಸ್ತುತ ಒಡಿಶಾದ ಬಾಲಸೂರ್ ಸಂಸದರೂ ಆಗಿರುವ ಕೇಂದ್ರ ಸಚಿವ ಸಾರಂಗಿ ದೆಹಲಿಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಕ್ವಾರಂಟೈನ್ (ಪ್ರತ್ಯೇಕ ವಾಸ)ನಲ್ಲಿದ್ದಾರೆ. ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ.

ಒಡಿಶಾದ ಬಿಜೆಪಿ ಶಾಸಕ ಸುಖಾಂತ್‍ಕುಮಾರ್ ನಾಯಕ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಅವರೊಂದಿಗೆ ಸಾರಂಗಿ ಎರಡು ಕಾರ್ಯಕ್ರಮಗಳಲ್ಲಿ ವೇದಿಕೆ ಹಂಚಿಕೊಂಡಿದ್ದರು. ನಂತರ ಕೇಂದ್ರ ಸಚಿವರು ಅಸೌಖ್ಯತೆಯಿಂದ ಬಳಲಿದರು.

ನಾನು ಸದ್ಯಕ್ಕೆ ಕೇಂದ್ರ ಸರ್ಕಾರದ ಆರೋಗ್ಯ ಮಾರ್ಗಸೂಚಿಯಂತೆ ಕ್ವಾರಂಟೈನ್‍ನಲ್ಲಿದ್ದೇನೆ. ವೈದ್ಯರು ನನ್ನ ಆರೋಗ್ಯದ ಮೇಲೆ ನಿಗಾ ವಹಿಸಿದ್ದಾರೆ ಎಂದು ಸಾರಂಗಿ ಟ್ವಿಟ್ ಮಾಡಿದ್ದಾರೆ. ಸಚಿವರ ಕೊರೊನಾ ವೈರಸ್ ಸೋಂಕು ಪರೀಕ್ಷೆ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

Facebook Comments