ರೈಲಿಗಾಗಿ ಮುಂದಿನ ಬಜೆಟ್ ವರೆಗೆ ಕಾಯುವ ಅಗತ್ಯವಿಲ್ಲ : ಪ್ರತಾಪ್ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು,ಜು.27-ನೂತನ ರೈಲಿಗಾಗಿ ರೈಲ್ವೆ ಬಜೆಟ್‍ಗಾಗಿಯೇ ಕಾಯಬೇಕಿದ್ದ ಪರಿಸ್ಥಿತಿ ಬದಲಾಗಿದೆ. ಮೋದಿ ಅವರ ಸರ್ಕಾರದಲ್ಲಿ ಮುಂದಿನ ಬಜೆಟ್‍ಗಾಗಿ ಕಾಯುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.  ನಗರದ ರೈಲ್ವೆ ನಿಲ್ದಾಣದಲ್ಲಿ ಮೆಮು ರೈಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, 2004ರಿಂದ 2014ರವರೆಗೆ ಒಂದೇ ಒಂದೂ ಹೊಸ ರೈಲನ್ನು ಪರಿಚಯಿಸಿರಲಿಲ್ಲ. ನೂತನ ರೈಲು ಆರಂಭಿಸಬೇಕೆಂದರೆ ಬಜೆಟ್‍ಗಾಗಿ ಕಾಯಬೇಕಿತ್ತು. ಈಗ ಎಲ್ಲವೂ ಬದಲಾಗಿದೆ ಎಂದು ನುಡಿದರು.

ಕೇವಲ ಒಂದು ವಾರ ಕಾದರೆ ಸಾಕು ಹೊಸ ರೈಲಿನ ಸೌಲಭ್ಯ ಸಿಗಲಿದೆ. ಎಲ್ಲ ರೈಲ್ವೆ ಇಲಾಖೆಗಳಿಗೂ ಕಾಯಕಲ್ಪ ನಡೆಯುತ್ತಿದೆ. ಕಳೆದ ಜನವರಿಯಲ್ಲಿ ಬೆಂಗಳೂರು-ಮೈಸೂರು-ಕಣ್ಣೂರು ಎಕ್ಸ್‍ಪ್ರೆಸ್‍ನ್ನು ಬೆಂಗಳೂರು-ಹಾಸನ ನಡುವೆ ಬ್ರಾಡ್‍ಗೇಜ್ ಕಾಮಗಾರಿ ಪೂರ್ಣವಾದ ನಂತರ ವಾರದಲ್ಲಿ 4 ದಿನ ಸಂಚರಿಸುವಂತೆ ಡೈವರ್ಟ ಮಾಡಲಾಯಿತು ಎಂದು ವಿವರಿಸಿದರು.

ಸಂಜೆ 8 ಗಂಟೆಗೆ ನಮಗೆ ರೈಲು ವ್ಯವಸ್ಥೆ ಇಲ್ಲ ಎಂದು ಜನ ಒತ್ತಡ ಹಾಕಿದ್ದರು. ಹಾಗಾಗಿ ಬೆಂಗಳೂರು ರಾಮನಗರ ನಡುವೆ ಮೆಮು ಸರ್ವೀಸ್ ಇದದ್ದನ್ನು ರೀ ಶೆಡ್ಯೂಲ್ ಮಾಡಿ ಸಂಜೆ 7.50ಕ್ಕೆ ಮೈಸೂರಿಗೆ ವಾರಕ್ಕೆ ನಾಲ್ಕು ದಿನಗಳು ಬರುವಂತೆ ಮಾಡಲಾಯಿತು. ರಾತ್ರಿ 10.30ಕ್ಕೆ ಇಲ್ಲಿಗೆ ತಲುಪುತ್ತಿತ್ತು. ಬೆಳಗಿನ ಜಾವ ಹೋಗುತ್ತಿತ್ತು. ಅಷ್ಟೊಂದು ಅನುಕೂಲವಾಗಿರದ ಈ ಸಮಯವನ್ನು ಬದಲಾಯಿಸಿ 5.20ಕ್ಕೆ ಬಂದು 8.30ಕ್ಕೆ ವಾಪಸ್ ಹೊರಡುವ ರೀತಿ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರೈಲ್ವೆ ಇಲಾಖೆಯಲ್ಲಿ ಆಗಿರುವ ಬದಲಾವಣೆಗಳಿಂದ ಒಳ್ಳೆಯ ಹೆಸರು ಬಂದಿದ್ದರೆ ಅದಕ್ಕೆ ಕಾರಣ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಕೊಟ್ಟ ನಿರ್ದೇಶನವನ್ನು ಅಧಿಕಾರಿಗಳು ಜಾರಿಗೆ ತಂದಿದ್ದಾರೆ. ಈಗ ಕೇಂದ್ರದಲ್ಲಿ ರಾಜ್ಯ ರೈಲ್ವೆ ಸಚಿವರಾಗಿ ಸುರೇಶ್ ಅಂಗಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಿಂದ ತ್ವರಿತವಾಗಿ ಕೆಲಸವಾಗುತ್ತಿದೆ.

ರೈಲ್ವೆ ಇಲಾಖೆ ಸಂಬಂಧಿಸಿದ ಏನೇನು ಬೇಡಿಕೆಗಳಿವೆಯೋ ಅವೆಲ್ಲವನ್ನೂ ಈಡೇರಿಸಲಾಗುವುದು. ಚೆನ್ನೈ ಸೂಪರ್ ಫಾಸ್ಟ್ ಎಕ್ಸ್‍ಪ್ರೆಸ್, ಕಾಚಿಗುಡ ಟೈನ್ ಬಂತು. ಮುಂದೆ ಮೈಸೂರಿನ ಟಿವೇಂಡ್ರಮ್ ಮತ್ತು ಮುಂಬೈಗೆ ತೆರಳುವ ರೈಲುಗಳನ್ನು ಆರಂಭಿಸಲಾಗುತ್ತಿದೆ.

ರೈಲ್ವೆ ಇಲಾಖೆಯಲ್ಲಿ ಅದೇ ವ್ಯವಸ್ಥೆ, ಅದೇ ಅಧಿಕಾರಿಗಳು ಅದೇ ಮನಸ್ಥಿತಿ ಇದ್ದರೂ ದೇಶಕ್ಕೆ ಓರ್ವ ಸಮರ್ಥ ಪ್ರಧಾನಿ ದೊರೆತರೆ ಯಾವ ರೀತಿಯ ಬದಲಾವಣೆ ತರಬಹುದು ಎಂಬುದು ಇಂದು ನಗರದಲ್ಲಿ ನಡೆಯುತ್ತಿರುವ ಸರಣಿ ರೈಲ್ವೆ ಕಾರ್ಯಕ್ರಮಗಳಿಂದ ತಿಳಿದುಬರುತ್ತಿದೆ ಎoದರು.

ಮೈಸೂರಿನಲ್ಲಿ ವಿಮಾನ ನಿಲ್ದಾಣವಿದ್ದರೂ ವಿಮಾನ ಸೌಲಭ್ಯವಿರಲಿಲ್ಲ. ಈಗ ಐದು ವಿಮಾನ ಬರುತ್ತಿವೆ. ಅಕ್ಟೋಬರ್ 27ರೊಳಗೆ 8 ವಿಮಾನ ಕಾರ್ಯ ನಿರ್ವಹಿಸಲಿವೆ ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪಲತಾ ಜಗನ್ನಾಥ್, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ಮೈಸೂರು ವಿಭಾಗೀಯ ವ್ಯವಸ್ಥಾಪಕರಾದ ಅಪರ್ಣಾ ಗಾರ್ಗ್, ಅಜಯ್‍ಕುಮಾರ್ ಸಿಂಗ್, ಗಿರಿಧರ್ ಮತ್ತಿತರ ಅಧಿಕಾರಿಗಳುಇದ್ದರು.

Facebook Comments