ಕೊರೊನಾ ಬಗ್ಗೆ ಜಾಗೃತರಾಗಿರಿ ಪ್ರವೀಣ್‍ಸೂದ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.19- ಕೊರೊನಾ ಸೋಂಕು ಇನ್ನು ಹೋಗಿಲ್ಲ. ಎಲ್ಲರೂ ಬಹಳ ಜಾಗೃತರಾಗಿರಿ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್‍ಸೂದ್ ಅವರು ತಮ್ಮ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಲಹೆ ನೀಡಿದರು. ಕೋರಮಂಗಲದ ಕೆಎಸ್‍ಆರ್‍ಪಿ ಪೆರೇಡ್ ಮೈದಾನದಲ್ಲಿ ಇಂದು ಏರ್ಪಡಿಸಿದ್ದ ಸೇವಾ ಕವಾಯತುನಲ್ಲಿ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ನೀವೂ ಎಚ್ಚರದಿಂದಿರಿ. ನಿಮ್ಮ ಕುಟುಂಬದವರನ್ನು ಸಹ ಕೋವಿಡ್ ಸೋಂಕಿನಿಂದ ಜಾಗೃತರಾಗಿರುವಂತೆ ನೋಡಿಕೊಳ್ಳಿ. ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕುಟುಂಬ ಸದಸ್ಯರಿಗೆ ತಿಳುವಳಿಕೆ ಹೇಳಬೇಕೆಂದು ಅವರು ತಿಳಿಸಿದರು. ಕೋವಿಡ್ ಸಂಕಷ್ಟದಲ್ಲೂ ಕಳೆದ ಒಂದು ವರ್ಷದ ಅವಧಿಯಲ್ಲಿ ಉತ್ತಮವಾದ ಕೆಲಸ ಮಾಡಿದ್ದೀರಿ ಎಂದು ಅಧಿಕಾರಿ ಮತ್ತು ಸಿಬ್ಬಂದಿ ವರ್ಗವನ್ನು ಪ್ರಶಂಸಿಸಿದರು.

ಕೋವಿಡ್ ಸೋಂಕು ತಡೆಗಟ್ಟಲು ವ್ಯಾಕ್ಸಿನ್ ಬಂದಿದೆ. ಒಂದು ವಾರದಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. ನಾಲ್ಕೈದು ದಿನಗಳಲ್ಲಿ ಶೇ.50ರಷ್ಟು ಸಿಬ್ಬಂದಿ ವ್ಯಾಕ್ಸಿನ್ ಪಡೆಯಲಿದ್ದಾರೆ. ಕೆಎಸ್‍ಆರ್‍ಪಿಯಲ್ಲಿ ಶೇ.70 ರಷ್ಟು ಸಿಬ್ಬಂದಿ ವ್ಯಾಕ್ಸಿನ್ ಪಡೆ ದಿದ್ದು, ಇನ್ನು ಒಂದು ವಾರದಲ್ಲಿ ಶೇ.80ರಷ್ಟಾಗುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಕೋವಿಡ್‍ನಿಂದ ಮೃತಪಟ್ಟಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಸರ್ಕಾರ ತಲಾ 30 ಲಕ್ಷ ರೂ. ನೀಡಿದೆ. ಇಲಾಖೆಯಿಂದ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಇದೇ ವೇಳೆ ಅವರು ತಿಳಿಸಿದರು. ಪೊಲೀಸ್ ಇಲಾಖೆಯಲ್ಲಿ ಶೇ.20ರಷ್ಟು ಮಹಿಳಾ ಮೀಸಲಾತಿ ಇತ್ತು. ಇದೀಗ ಶೇ.25ಕ್ಕೆ ಹೆಚ್ಚಿಸಲಾಗಿದೆ. ಆರೋಗ್ಯ ಭಾಗ್ಯಕ್ಕೆ ಸರ್ಕಾರದಿಂದ ಹೆಚ್ಚಿನ ಹಣ ನೀಡಲಾಗಿದೆ ಎಂದು ಹೇಳಿದರು.

ಕೆಎಸ್‍ಆರ್‍ಪಿಯಲ್ಲಿ ಬಡ್ತಿಗೆ ಹೆಚ್ಚು ಒತ್ತು ನೀಡಲಾಗಿದೆ. ಇಲಾಖೆಯಲ್ಲಿ ನೇಮಕಾತಿ ಪ್ರಗತಿಯಲ್ಲಿದ್ದು, ಇತ್ತೀಚೆಗೆ 4000 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಮೂಲಕ ಕೆಲಸದ ಒತ್ತಡವನ್ನು ಕಡಿಮೆ ಮಾಡಲಾಗಿದೆ ಎಂದರು.

ಪೊಲೀಸರಿಗೆ ವಸತಿ:
ಪೊಲೀಸ್ ಸಿಬ್ಬಂದಿಗಳಿಗೆ ವಸತಿ ನೀಡಲು ಹೆಚ್ಚು ಗಮನಹರಿಸಲಾಗಿದೆ. ಶಿಥಿಲಗೊಂಡಿರುವ ವಸತಿಗೃಹಗಳನ್ನು ನೆಲಸಮ ಮಾಡುವಂತೆಯೂ ಸೂಚಿಸಲಾಗಿದೆ. ಇದುವರೆಗೂ 11 ಸಾವಿರ ಮನೆಗಳನ್ನು ಕಲ್ಪಿಸಲಾಗಿದೆ. ಮುಂದಿನ ಐದು ವರ್ಷದೊಳಗೆ ಇನ್ನು 10 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಕಳೆದ ಒಂದು ವರ್ಷದಿಂದ ಉತ್ತಮವಾಗಿ ಕೆಲಸ ಮಾಡಿದ್ದೀರಿ. ಇದೇ ರೀತಿ ಮುಂದೆಯೂ ಕಾರ್ಯ ನಿರ್ವಹಿಸಿ ಇಲಾಖೆಗೆ ಒಳ್ಳೆಯ ಹೆಸರು ತನ್ನಿ. ನಾಗರಿಕರಿಗೆ ಅನುಕೂಲವಾಗುವಂತಹ ಕೆಲಸ ಮಾಡಿ. ಅಧಿಕಾರಿ ಮತ್ತು ಸಿಬ್ಬಂದಿಗೆ ನಮ್ಮಿಂದ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ದೊರೆಯಲಿದೆ ಎಂದು ಪ್ರವೀಣ್‍ಸೂದ್ ಅಭಯ ನೀಡಿದರು.

Facebook Comments