ಹೊಸ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಪ್ರವೀಣ್‍ಸೂದ್ ನೇಮಕ ಬಹುತೇಕ ಖಚಿತ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.29-ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಸಿಐಡಿ ವಿಭಾಗದ ಮುಖ್ಯಸ್ಥ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್‍ಸೂದ್ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
ಹಾಲಿ ಪೊಲೀಸ್ ಮಹಾನಿರ್ದೇಶಕರಾಗಿರುವ ನೀಲಮಣಿ ಎನ್.ರಾಜು ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾಗಲಿದ್ದು, ತೆರವಾಗುವ ಈ ಸ್ಥಾನಕ್ಕೆ ಸಿಐಡಿ ವಿಭಾಗದ ಡಿಐಜಿ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲು ಸರ್ಕಾರ ಒಲವು ತೋರಿದೆ.

ಕೊನೆ ಕ್ಷಣದಲ್ಲಿ ಯಾವುದೇ ಅಚ್ಚರಿಯ ಬೆಳವಣಿಗೆ ನಡೆಯದಿದ್ದರೆ ಪ್ರವೀಣ್‍ಸೂದ್ ಅವರು ರಾಜ್ಯ ಪೊಲೀಸ್ ಇಲಾಖೆಯ ನೂತನ ಮುಖ್ಯಸ್ಥರಾಗಿ ಶುಕ್ರವಾರವೇ ಅಧಿಕಾರ ಸ್ವೀಕರಿಸಲಿದ್ದಾರೆ. ಸೂದ್ ಅವರನ್ನು ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಲು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ವಿಶೇಷ ಆಸಕ್ತಿವಹಿಸಿದ್ದಾರೆ. ಅಲ್ಲದೆ ಬಿಜೆಪಿ ದೆಹಲಿ ನಾಯಕರಿಂದಲೂ, ಅವರನ್ನೇ ಆ ಸ್ಥಾನಕ್ಕೆ ನೇಮಿಸುವಂತೆ ಮೌಖಿಕ ಆದೇಶ ಬಂದಿದೆ.

ಈ ಹಿಂದೆ ರಾಜ್ಯ ಸರ್ಕಾರ ಡಿಜಿ ಸ್ಥಾನಕ್ಕೆ ಮೂವರ ಹೆಸರನ್ನು ಕೇಂದ್ರ ಗೃಹ ಇಲಾಖೆಗೆ ಶಿಫಾರಸ್ಸು ಮಾಡಿತ್ತು. ಇದರಲ್ಲಿ ಸಿಐಡಿ ವಿಭಾಗ ಡಿಐಜಿ ಪ್ರವೀಣ್‍ಸೂದ್, ಆಂತರಿಕ ವಿಭಾಗದ ಮುಖ್ಯಸ್ಥ ಎ.ಎಂ.ಪ್ರಸಾದ್, ತರಬೇತಿ ವಿಭಾಗದ ಮುಖ್ಯಸ್ಥ ಪದಮ್ ಕುಮಾರ್ ಗರ್ಗ್ ಹೆಸರುಗಳನ್ನು ಕಳುಹಿಸಿಕೊಡಲಾಗಿತ್ತು.

ನಿಯಮಾವಳಿ ಪ್ರಕಾರ ಡಿಜಿ ಹುದ್ದೆಗೆ ಯಾವುದೇ ಅಧಿಕಾರಿಯನ್ನು ನೇಮಕ ಮಾಡುವ ಮುನ್ನ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿಕೊಡುವುದು ಶಿಷ್ಟಾಚಾರವಾಗಿದೆ. ಈ ಅಧಿಕಾರಿಯ ಪೂರ್ವಪರ ಹಾಗೂ ಹಿನ್ನೆಲೆಯನ್ನು ಪರಿಶೀಲಿಸಿ ನಂತರವೇ ನೇಮಕಕ್ಕೆ ಅನುಮತಿ ನೀಡಲಾಗುತ್ತದೆ.

ರೇಸ್‍ನಲ್ಲಿ ಯಾರ್ಯಾರು?: ಪ್ರವೀಣ್ ಸೂದ್, ಡಿಜಿಪಿ, ಸಿಐಡಿ: ಸದ್ಯ ಮುಂಚೂಣಿಯಲ್ಲಿರುವ ಹೆಸರು ಪ್ರವೀಣ್ ಸೂದ್ ಅವರದ್ದು. ಇವರು 1986ರ ಬ್ಯಾಚ್‍ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರ ಸೇವಾ ಅವಧಿ 2024 ಏಪ್ರಿಲ್ ಅಂತ್ಯದವರೆಗೆ ಇದೆ. ಅಲ್ಲದೇ ನಗರ ಪೊಲೀಸ್ ಇಲಾಖೆಯಲ್ಲಿ ಕೂಡ ಇವರು ಸೇವೆ ಸಲ್ಲಿಸಿದ್ದಾರೆ. ಒಂದು ವೇಳೆ ಪ್ರವೀಣ್ ಸೂದ್ ಪೊಲೀಸ್‍ಮಹಾನಿರ್ದೇಶಕರಾದರೆ ಸುಮಾರು ನಾಲ್ಕೂವರೆ ವರ್ಷಗಳ ಕಾಲ ಸೇವೆ ಸಲ್ಲಿಸಬಹುದು.

ಎ.ಎಂ.ಪ್ರಸಾದ್ ಡಿಜಿಪಿ, ಐಎಸ್‍ಡಿ: ಇವರು ಸೇವಾ ಹಿರಿತನದ ಆಧಾರದ ಮೇಲೆ ರೇಸ್‍ನಲ್ಲಿದ್ದು, 1985ರ ಬ್ಯಾಚ್‍ನವರು. ಸದ್ಯ ಐಎಸ್‍ಡಿ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಆಯ್ಕೆಯಾದಲ್ಲಿ ಒಂಭತ್ತು ತಿಂಗಳ ಕಾಲ ಮಾತ್ರ ಪೊಲೀಸ್ ಮಹಾನಿರ್ದೇಶಕರಾಗಿರಬಹುದು.  ಆದರೆ ರಾಜ್ಯ ಸರ್ಕಾರ ಮನಸ್ಸು ಮಾಡಿ ಅವರ ಸೇವಾ ಅವಧಿಯನ್ನ ಎರಡು ವರ್ಷಕ್ಕೆ ವಿಸ್ತರಿಸಿದರೆ ಅವರು ಮುಂದಿನ ಎರಡು ವರ್ಷಗಳ ಕಾಲ ಡಿಜಿ ಮತ್ತು ಐಜಿಪಿ ಆಗಿ ಸೇವೆ ಸಲ್ಲಿಸಬಹುದು.

ಪದಮ್ ಕುಮಾರ್ ಗರ್ಗ್ : ಇವರು 1986ನೇ ಬ್ಯಾಚ್‍ನವರು. ಅಪರಾಧ ಮತ್ತು ತಾಂತ್ರಿಕ ವಿಭಾಗದದಲ್ಲಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಸದ್ಯ ತರಬೇತಿ ವಿಭಾಗದಲ್ಲಿದ್ದು ಇದೇ ವರ್ಷ ಏಪ್ರಿಲ್‍ಗೆ ಸೇವಾ ಅವಧಿ ಮುಕ್ತಾಯಗೊಳ್ಳಲಿದೆ. ರಾಜ್ಯ ಸರ್ಕಾರ ಎರಡು ವರ್ಷ ಸೇವಾ ಅವಧಿಯನ್ನು ವಿಸ್ತರಿಸುವ ಅವಕಾಶವೂ ಇದೆ. ಈ ಮೂವರು ಅಧಿಕಾರಿಗಳು ರೇಸ್‍ನಲ್ಲಿದ್ದು, ಯಾರಿಗೆ ಹುದ್ದೆ ಸಿಗಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ. ಹಾಗೆಯೇ ರಾಜಕೀಯ ವಲಯದಲ್ಲಿ ಕೂಡ ಈ ವಿಚಾರ ಬಹಳ ಚರ್ಚೆಯಲ್ಲಿದೆ.

Facebook Comments