ಬೆಂಗಳೂರಲ್ಲಿ ಮತ್ತೆ ಘರ್ಜಿಸಿದ ಪೊಲೀಸ್ ರಿವಾಲ್ವರ್,  ರೌಡಿ ಸಹಚರನಿಗೆ ಗುಂಡೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.19- ರೌಡಿಗಳ ಸದ್ದಡಗಿಸಲು ಪೊಲೀಸರ ರಿವಾಲ್ವರ್‍ಗಳು ಸದ್ದು ಮಾಡುತ್ತಿದ್ದು, ನಿನ್ನೆ ಒಂದೇ ದಿನ ಎರಡು ಕಡೆ ಗುಂಡು ಹಾರಿಸಿ ಇಬ್ಬರು ರೌಡಿಗಳನ್ನು ಬಂಧಿಸಿರುವ ಬೆನ್ನಲ್ಲೇ ಇಂದು ಬೆಳ್ಳಂಬೆಳಗ್ಗೆ ಮತ್ತೊಬ್ಬ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಪೀಣ್ಯ ವ್ಯಾಪ್ತಿಯ ಅಂದ್ರಹಳ್ಳಿಯ ರಾಘವೇಂದ್ರನಗರದ ನಿವಾಸಿ ಪ್ರವೀಣ್(22) ಪೀಣ್ಯ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ.

ಈತ ರೌಡಿ ಅನಿಲ್‍ಕುಮಾರ್ ಮತ್ತು ಆಟೋ ರಾಮನ ಸಹಚರ. ಜ.16ರಂದು ತಿಪ್ಪೇಹಳ್ಳಿ ಪ್ರದೇಶದ ನೀಲಗಿರಿ ಫಾರೆಸ್ಟ್ ಬಳಿ ಅನಿಲ್ ಅಲಿಯಾಸ್ ಅನೀಲ್‍ಕುಮಾರ್ ಗ್ಯಾಂಗ್‍ನ ಸಹಚರರು ಎದುರಾಳಿ ಗ್ಯಾಂಗ್‍ನ ರೌಡಿ ಅಭಿಷೇಕ್ ಅಲಿಯಾಸ್ ಅಂದ್ರಹಳ್ಳಿ ಅಭಿ ಕೊಲೆಗೆ ಹೊಂಚು ಹಾಕಿದ್ದರು ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೀಣ್ಯ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಮೂವರನ್ನು ಬಂಧಿಸಿ 2 ಕೆಜಿ ಗಾಂಜಾ, 2 ಲಾಂಗು ವಶಪಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಆರು ಮಂದಿ ಪರಾರಿಯಾಗಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.17ರಂದು ಪೊಲೀಸರು ಇಬ್ಬರನ್ನು ಬಂಧಿಸಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರವೀಣ್‍ಗಾಗಿ ಹುಡುಕಾಟ ನಡೆಸುತ್ತಿದ್ದರು. ಆರೋಪಿ ಪ್ರವೀಣ್ ತಿಪ್ಪೇನಹಳ್ಳಿ ನಿರ್ಮಾಣ ಹಂತದ ಕಟ್ಟಡದ ಕಾಂಪೌಡ್ ಬಳಿ ಇಂದು ಮುಂಜಾನೆ 4.40ರ ಸುಮಾರಿನಲ್ಲಿ ಇರುವ ಬಗ್ಗೆ ಸಬ್‍ನ್ಸ್‍ಪೆಕ್ಟರ್ ಮಾಯಣ್ಣ ಬಿರಾನಿ ಮತ್ತು ಅವರ ತಂಡಕ್ಕೆ ಮಾಹಿತಿ ಲಭಿಸಿದೆ.

ಸಬ್‍ಇನ್ಸ್‍ಪೆಕ್ಟರ್ ಮಾಯಣ್ಣ ಬಿರಾನಿ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾವಿಸಿ ಬಂಧಿಸಲು ಹೋದಾಗ ಆರೋಪಿ ಪ್ರವೀಣ್ ಮಚ್ಚಿನಿಂದ ಹೆಡ್‍ಕಾನ್‍ಸ್ಟೇಬಲ್ ರಂಗಸ್ವಾಮಿ ಅವರ ಮೇಲೆ ಹಲ್ಲೆ ಮಾಡಿದ್ದಾನೆ. ತಕ್ಷಣ ಸಬ್‍ಇನ್ಸ್‍ಪೆಕ್ಟರ್ ಮಾಯಣ್ಣ ಬಿರಾನಿ ಆವರು ಆರೋಪಿಗೆ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಎಚ್ಚರಿಸಿದ್ದಾರೆ.
ಸಬ್‍ಇನ್ಸ್‍ಪೆಕ್ಟರ್ ಮಾತನ್ನು ಲೆಕ್ಕಿಸದೆ ಮತ್ತೆ ಹಲ್ಲೆಗೆ ಮುಂದಾದಾಗ ಬಿರಾನಿ ಅವರು ಹಾರಿಸಿದ ಗುಂಡು ಆರೋಪಿ ಪ್ರವೀಣ್ ಬಲಗಾಲಿಗೆ ತಗುಲಿದೆ.

ಗುಂಡೇಟಿನಿಂದ ಗಾಯಗೊಂಡು ಕುಸಿದು ಬಿದ್ದ ಆರೋಪಿ ಪ್ರವೀಣ್‍ನನ್ನು ಪೊಲೀಸರು ಸುತ್ತುವರಿದು ಬಂಧಿಸಿ ಚಿಕಿತ್ಸೆಗಾಗಿ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಾಚರಣೆ ವೇಳೆ ಗಾಯಗೊಂಡಿರುವ ಹೆಡ್‍ಕಾನ್‍ಸ್ಟೇಬಲ್ ರಂಗಸ್ವಾಮಿ ಅವರೂ ಸಹ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಪ್ರವೀಣ್ ವಿರುದ್ಧ ವಿವಿಧ ಪೆÇಲೀಸ್ ಠಾಣೆಗಳಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments