ಬಿಗ್ ನ್ಯೂಸ್ : ಸೋಂಕಿತರ ಪ್ರಥಮ-ದ್ವಿತೀಯ ಸಂಪರ್ಕಿತರಿಗೆ ಕೊರೋನಾ ಟೆಸ್ಟ್ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.29- ಕೊರೊನಾ ಸೋಂಕಿತರೊಂದಿಗೆ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದವರು ಪರೀಕ್ಷೆಗೊಳಪಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತಂತೆ ಇಂದು ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಸಮ್ಮುಖದಲ್ಲಿ ಬಿಬಿಎಂಪಿ ಅಕಾರಿಗಳ ಜತೆ ಮಹತ್ವದ ಸಭೆ ನಡೆಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಪ್ರಧಾನಿ ಅವರ ಸೂಚನೆ ಮೇರೆಗೆ ನಗರದಲ್ಲಿ ಕೋವಿಡ್ ನಿಯಂತ್ರಣ ಮಾಡಲೇಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆರಂಭದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸೋಂಕು ನಿಯಂತ್ರಣದಲ್ಲಿತ್ತು. ಇತರೆ ಎಲ್ಲಾ ರಾಜ್ಯಗಳಿಗಿಂತಲೂ ನಾವು ಸುರಕ್ಷಿತ ವಲಯದಲ್ಲಿದ್ದೆವು. ಆದರೆ, ಇತ್ತೀಚೆಗೆ ಸೋಂಕು ವೇಗವಾಗಿ ಹರಡುತ್ತಿದೆ. ಬೇರೆ ರಾಜ್ಯಗಳಿಗಿಂತಲೂ ನಾವು ಹೆಚ್ಚು ಸಂತ್ರಸ್ತರಾಗಿದ್ದೇವೆ.

ಇತ್ತೀಚೆಗೆ ವಿಡಿಯೋ ಕಾನರೆನ್ಸ್ ಮೂಲಕ ಏಳು ರಾಜ್ಯಗಳ ಜತೆ ಸಮಾಲೋಚನೆ ನಡೆಸಿದ ಪ್ರಧಾನಮಂತ್ರಿ ನರೇದ್ರ ಮೋದಿ ಅವರು, ಕರ್ನಾಟಕದ ಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕನ್ನು ಶೇ.13ರ ಪ್ರಮಾಣಕ್ಕಿಂತ ಶೇ.5ರ ಪ್ರಮಾಣದಲ್ಲಿ ನಿಯಂತ್ರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ಅದಕ್ಕೆ ಪೂರಕವಾಗಿ ಕ್ರಮ ಕೈಗೊಳ್ಳಲೇಬೇಕೆಂದು ಸುಧಾಕರ್ ತಾಕೀತು ಮಾಡಿದ್ದಾರೆ.

ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಅದನ್ನು ಉಲ್ಲಂಘಿಸುವವರ ವಿರುದ್ಧ ಮುಲಾಜಿಲ್ಲದೆ ಕೇಸು ದಾಖಲಿಸಬೇಕು, ದಂಡ ಹಾಕಬೇಕು, ಬಿಬಿಎಂಪಿ ಮಾರ್ಷಲ್‍ಗಳು, ಪೊಲೀಸರು ಈ ನಿಟ್ಟಿನಲ್ಲಿ ಹೆಚ್ಚು ನಿಷ್ಟೂರವಾದ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಸೂಚಿಸಿದರು.

ಕೆಲಸ ಮಾಡುವ ಕಂಪೆನಿಗಳಲ್ಲಿ ಸೋಂಕು ತಗುಲಿದರೆ ಸೋಂಕಿತನ ಸುತ್ತಮುತ್ತ ಕುಳಿತುಕೊಳ್ಳುವವರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕ್ವಾರಂಟೈನ್ ಆಗುವುದು ಅಗತ್ಯವಿದೆ.

ಒಂದು ವೇಳೆ ಅದು ಸಾಧ್ಯವಿಲ್ಲ. ಕೆಲಸ-ಕಾರ್ಯಗಳಿಗೆ ತೊಂದರೆಯಾಗುತ್ತದೆ ಎಂಬುದಾದರೆ ಕ್ವಾರಂಟೈನ್ ಕೈ ಬಿಡಬಹುದು. ಆದರೆ, ಪರೀಕ್ಷೆ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಬೆಂಗಳೂರಿನಲ್ಲಿ ಪ್ರತಿ ದಿನದ ಪರೀಕ್ಷೆಯ ಪ್ರಮಾಣ 70ಸಾವಿರದಷ್ಟಿದೆ. ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸಬೇಕು. ಬಿಬಿಎಂಪಿ ಅಕಾರಿಗಳು ಬೇರೆಲ್ಲಾ ಕೆಲಸಗಳನ್ನು ಬದಿಗೊತ್ತಿ ಕೋವಿಡ್ ನಿಯಂತ್ರಣವನ್ನು ಆದ್ಯತೆಯಾಗಿ ಕೈಗೆತ್ತಿಕೊಳ್ಳಬೇಕು. ಪ್ರಧಾನ ಮಂತ್ರಿಯವರು ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದರು.

ಬೆಂಗಳೂರಿನಲ್ಲಿ ಸೋಂಕಿತರ ಪ್ರಮಾಣ ಶೇ.13.48ರಷ್ಟಿದೆ. ಅದನ್ನು ಶೇ.5ರೊಳಗೆ ನಿಯಂತ್ರಿಸಿ. ಸಾವಿನ ಪ್ರಮಾಣ ಶೇ.1.4ರಷ್ಟಿದೆ. ಅದನ್ನು ಶೇ.1ರೊಳಗೆ ನಿಯಂತ್ರಣ ಮಾಡಿ ಎಂದು ಸೂಚಿಸಿದ್ದಾರೆ. ಹಾಗಾಗಿ ನಾವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.

ಹೋಟೆಲ್, ಕಲ್ಯಾಣಮಂಟಪ, ಸಭೆ ಸಮಾರಂಭಗಳಲ್ಲಿ ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಬೇಕು. ಯಾವ ಸ್ಥಳದಲ್ಲಿ ನಿಯಮ ಮೀರಿ ನಡೆದುಕೊಳ್ಳಲಾಗುತ್ತದೆಯೋ ಅಲ್ಲಿನ ಜವಾಬ್ದಾರಿತ ವ್ಯಕ್ತಿಯನ್ನು ಹೊಣೆಗಾರರನ್ನಾಗಿ ಮಾಡಬೇಕು.

ಒಂದು ವೇಳೆ ಕಾನೂನು ಪಾಲನೆ ಮಾಡದಿದ್ದರೆ ಲೈಸೆನ್ಸ್ ರದ್ದುಗೊಳಿಸುವಂತಹ ಕಠಿಣ ಕ್ರಮಕ್ಕೂ ಹಿಂದು ಮುಂದು ನೋಡಬಾರದು ಎಂದು ಸುಧಾಕರ್ ಎಚ್ಚರಿಸಿದ್ದಾರೆ.

ಕೋವಿಡ್ ನಿಯಂತ್ರಣದ ನೋಡೆಲ್ ಅಕಾರಿಗಳಾದ ಬಿಬಿಎಂಪಿ ಜಂಟಿ ಆಯುಕ್ತರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಅನೇಕ ಅಕಾರಿಗಳು ವಿಡಿಯೋ ಕಾನರೆನ್ಸ್ ಮೂಲಕ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.

Facebook Comments

Sri Raghav

Admin