ಪೊಲೀಸರ ಕಣ್ಣೆದುರೇ ಜೈಲಿನಿಂದ ಖೈದಿ ಎಸ್ಕೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಆ.8-ಖತರ್ನಾಕ್ ಸರಗಳ್ಳನೊಬ್ಬ ಕೋರ ಪೊಲೀಸ್ ಠಾಣೆಯ ಬಂಖಾನೆಯಿಂದ ರಾತ್ರಿ ಪರಾರಿಯಾಗಿದ್ದು, ಘಟನೆ ಸಂಬಂಧ ಆರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಎಸ್ಪಿ ಅವರು ಅಮಾನತು ಮಾಡಿದ್ದಾರೆ.

ಮಧುಗಿರಿ ತಾಲ್ಲೂಕು ಮಿಡಿಗೇಶಿ ಮೂಲದ ರಂಗಪ್ಪ ಅಲಿಯಾಸ್ ಪುನೀತ ಎಂಬಾತನೇ ಜೈಲಿನಿಂದ ಪರಾರಿಯಾಗಿರುವ ಆರೋಪಿ. ಈತ ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಅಂತರಸನಹಳ್ಳಿಯಲ್ಲಿ ವಾಸವಾಗಿದ್ದು, ಸರಗಳ್ಳತನ, ದರೋಡೆ ಪ್ರಕರಣ ದಾಖಲಾಗಿವೆ.ಕುಖ್ಯಾತ ಸರಗಳ್ಳನಾದ ರಂಗಪ್ಪನನ್ನು ಕೋರಾ ಠಾಣೆ ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದು ಕಳೆದೆರಡು ದಿನಗಳಿಂದ ತೀವ್ರ ವಿಚಾರಣೆಗೊಳಪಡಿಸಿದ್ದರು.

ಈ ಸಂದರ್ಭದಲ್ಲಿ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕಳವು ಮಾಲುಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕಿತ್ತು. ಅಲ್ಲದೆ ಈ ನಡುವೆ ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಬ್‍ಇನ್‍ಸ್ಪೆಕ್ಟರ್ ಹರೀಶ್ ಮತ್ತು ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ಶೇಷಾದ್ರಿ ಅವರು ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದರು.

ಕಳೆದ ರಾತ್ರಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ಸಬ್‍ಇನ್‍ಸ್ಪೆಕ್ಟರ್ ಊಟಕ್ಕೆ ತೆರಳಿದ್ದರು. ರಾತ್ರಿ ಬಂಖಾನೆಯಲ್ಲಿದ್ದ ಕೈದಿಗಳಿಗೆ ಊಟ ನೀಡಲಾಗಿತ್ತು.

ಕೊರೊನಾ ಹಿನ್ನೆಲೆಯಲ್ಲಿ ಊಟದ ಕವರ್‍ನ್ನು ಅವರವರೇ ಬಿಸಾಡಬೇಕಿತ್ತು. ಪೊಲೀಸರು ಅದನ್ನು ಮುಟ್ಟುತ್ತಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ರಂಗಪ್ಪ ಊಟ ಮಾಡಿದ ಕವರ್‍ನ್ನು ಠಾಣೆಯ ಹೊರ ಭಾಗಕ್ಕೆ ಎಸೆಯಲು ಹೋಗಿ ಸಿನಿಮೀಯ ರೀತಿ ಎಸ್ಕೇಪ್ ಆಗಿದ್ದಾನೆ.

ಠಾಣೆಯಲ್ಲಿ ಒಟ್ಟು ಆರು ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಷ್ಟೂ ಸಿಬ್ಬಂದಿಗಳಿಗೂ ಸರಗಳ್ಳ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದಾನೆ.

ಇನ್‍ಸ್ಪೆಕ್ಟರ್ ಶೇಷಾದ್ರಿ ಅವರು ಸಾಮಾಜಿಕ ಅಂತರ ಕಾಯ್ದುಕೊಂಡು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಿ ಎಂದು ಹೇಳಿದ್ದೇ ಆರೋಪಿಗಳಿಗೆ ವರವಾಗಿದೆ.

# ಏಳು ಪ್ರಕರಣ ದಾಖಲು:
ಆರೋಪಿ ವಿರುದ್ಧ ಏಳು ಪ್ರಕರಣಗಳು ದಾಖಲಾಗಿದ್ದು, ಕೋರಾ ಪೊಲೀಸ್ ಠಾಣೆಯಲ್ಲಿ ಮೂರು, ಬೆಳ್ಳಾವಿ ಮತ್ತು ತಿಲಕ್‍ಪಾರ್ಕ್‍ಟ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ, ದರೋಡೆ ಪ್ರಕರಣ ಸೇರಿ ಏಳು ಪ್ರಕರಣಗಳು ದಾಖಲಾಗಿವೆ.

ಎಸ್ಪಿ ಕೆಂಡಾಮಂಡಲ: ಜೈಲಿನಿಂದ ಸರಗಳ್ಳ ಪರಾರಿಯಾಗಿರುವ ಸುದ್ದಿ ತಿಳಿದು ಎಸ್ಪಿ ಕೋನವಂಶ ಕೃಷ್ಣ ಅವರು ಕೆಂಡಮಂಡಲರಾಗಿ ತಕ್ಷಣ ಈ ಬಗ್ಗೆ ವರದಿ ನೀಡುವಂತೆ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದ್ದಾರೆ.

# ಆರು ಮಂದಿ ಅಮಾನತು:
ಎಸ್ಪಿ ಅವರ ಸೂಚನೆ ಮೇರೆಗೆ ಡಿವೈಎಸ್ಪಿ ಅವರು ವರದಿ ನೀಡಿದ್ದು, ವರದಿ ಆಧರಿಸಿ ಎಸ್ಪಿ ಅವರು ಆರು ಮಂದಿ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ.

ಹೆಡ್‍ಕಾನ್‍ಸ್ಟೆಬಲ್‍ಗಳಾದ ಗಂಗಬಸವಯ್ಯ, ನರಸಿಂಹಮೂರ್ತಿ, ಕಾನ್‍ಸ್ಟೆಬಲ್‍ಗಳಾದ ಪ್ರದೀಪ್, ಮಂಜುನಾಥ್, ಶಿವಣ್ಣ, ಮಂಜುನಾಥ್ ಎಂಬುವರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ. ಕರ್ತವ್ಯಲೋಪದಡಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ಶೇಷಾದ್ರಿ ಹಾಗೂ ಸಬ್‍ಇನ್‍ಸ್ಪೆಕ್ಟರ್ ಹರೀಶ್ ವಿರುದ್ಧ ತನಿಖೆ ನಡೆಸಿ ವರದಿ ನೀಡುವಂತೆ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರಿಗೆ ಎಸ್ಪಿ ತಿಳಿಸಿದ್ದಾರೆ.

Facebook Comments

Sri Raghav

Admin