ಕ್ಯಾತ್ಸಂದ್ರ ಬಳಿ ಧಗಧಗಿಸಿದ ಮತ್ತೊಂದು ಖಾಸಗಿ ಬಸ್, ಪ್ರಯಾಣಿಕರು ಬಚಾವ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಮೇ 11- ಚಲಿಸುತ್ತಿದ್ದ ಖಾಸಗಿ ಬಸ್‍ನಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದರೂ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕ್ಯಾತ್ಸಂದ್ರ ಬಳಿ ಇಂದು ಬೆಳಗ್ಗೆ ನಡೆದಿದೆ.

ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಬಾವಿಯಿಂದ 30 ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳುತ್ತಿದ್ದ ಎಸ್‍ಆರ್‍ಎಸ್ ಸ್ಲೀಪಿಂಗ್ ಕೋಚ್ ಇಂದು ಬೆಳಗ್ಗೆ ಬೆಂಗಳೂರಿಗೆ ತಲುಪಬೇಕಿತ್ತು.

ಶಿರಾ ಗೇಟ್ ಬೈಪಾಸ್ ಬಳಿ ಬಸ್‍ನ ಹಿಂಭಾಗದಲ್ಲಿರುವ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು , ಸುಮಾರು 5 ಕಿ.ಮೀವರೆಗೂ ಬಸ್ ಸಂಚರಿಸದೆ ಕ್ಯಾತ್ಸಂದ್ರ ಸಮೀಪ ಬಸ್ ಬರುತ್ತಿದ್ದಂತೆ ಪ್ರಯಾಣಿಕರೊಬ್ಬರಿಗೆ ಬಸ್‍ಗೆ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದ್ದು , ಕೂಡಲೇ ಚಾಲಕನಿಗೆ ತಿಳಿಸಿದ್ದು, ಸಹ ಪ್ರಯಾಣಿಕರನ್ನು ನಿದ್ರೆಯಿಂದ ಎಬ್ಬಿಸಿ ಕೆಳಗಿಳಿಸಿ ಸಂಭವಿಸಬಹುದಾದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದರಾದರೂ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಅಲ್ಲದೆ ಪ್ರಯಾಣಿಕರ ಲಗೇಜ್‍ಗಳು ಸಹ ಸುಟ್ಟು ಹೋಗಿವೆ ಎಂದು ಹೇಳಲಾಗಿದೆ.

ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ರಾಜು, ಡಿವೈಎಸ್ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin