ಪ್ರಯಾಣಿಕರಿಂದ ಸುಲಿಗೆಗಿಳಿದ ಖಾಸಗಿ ವಾಹನ ಮಾಲೀಕರಿಗೆ ಡಿಸಿಎಂ ಸವದಿ ವಾರ್ನಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.23- ಕರೋನಾ ಪಿಡುಗನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮವಾಗಿ ಸಾರಿಗೆ ಸಂಸ್ಥೆಗಳ ಬಸ್ಸು ಮತ್ತು ರೈಲು ಸಂಚಾರವನ್ನು ಕಡಿಮೆಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಸವದಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಈ ಪರಿಸ್ಥಿತಿಯನ್ನು ದುರುಪಯೋಗ ಪಡಿಸಿಕೊಂಡು ಕೆಲವೆಡೆ ಖಾಸಗಿ ವಾಹನಗಳು, ಖಾಸಗಿ ಬಸ್ಸುಗಳ ಮತ್ತು ಆಟೋರಿಕ್ಷಾಗಳ ಮಾಲೀಕರು ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಸುಲಿಗೆ ಮಾಡಿ, ಶೋಷಿಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ.

ಅಷ್ಟೇ ಅಲ್ಲ ಕೆಲವು ಜಿಲ್ಲೆಗಳನ್ನು ಈಗಾಗಲೇ ಲಾಕ್‍ಔಟ್ ಜಿಲ್ಲೆಗಳೆಂದು ಘೋಷಿಸಲಾಗಿದ್ದು, ಇಂತಹ ಕಡೆಗಳಿಗೆ ಅಂತರ್ ಜಿಲ್ಲಾ ಬಸ್ಸುಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸಾರ್ವಜನಿಕರ ಆರೋಗ್ಯದ ಹಿತರಕ್ಷಣೆಯನ್ನು ಗಮನಿಸಿ ಕೈಗೊಳ್ಳಲಾದ ಸರ್ಕಾರದ ಈ ನಿರ್ಧಾರವನ್ನು ಯಾರೂ ಉಲ್ಲಂಘಿಸಬಾರದು. ಈಗಾಗಲೇ ಇಂತಹ ಪ್ರಕರಣಗಳನ್ನು ತಡೆಗಟ್ಟ ಬೇಕೆಂದು ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಆದಾಗ್ಯೂ ಇಂತಹ ಪ್ರಕರಣಗಳು ಮರುಕಳಿಸಿದರೆ ಅಂತಹವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ. ಜನರ ಜೀವದ ಜೊತೆಗೆ ಚೆಲ್ಲಾಟವಾಡಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಹವಣಿಸಿದರೆ ಅಂತಹವರಿಗೆ ತಕ್ಕ ಶಾಸ್ತಿ ಮಾಡಲಾಗುವುದು.

ಕರೋನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುತ್ತಿರುವ ಈ ಎಲ್ಲ ಕ್ರಮಗಳಿಗೆ ಖಾಸಗಿ ವಾಹನ ಸಂಸ್ಥೆಗಳು ಮತ್ತು ಸಾರ್ವಜನಿಕರು ತಮ್ಮ ಸಂಪೂರ್ಣ ಸಹಕಾರ್ನ ನೀಡಬೇಕೆಂದು ಮತ್ತೊಮ್ಮೆ ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ.

Facebook Comments

Sri Raghav

Admin