ಪೋಷಕರನ್ನು ಪೆಡಂಭೂತದಂತೆ ಕಾಡಲಾರಂಭಿಸಿದ ಖಾಸಗಿ ಶಿಕ್ಷಣ ಸಂಸ್ಥೆಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.10- ಕೊರೊನಾ ಸಂಕಷ್ಟ ಕಾಲದಲ್ಲಿ ಶೈಕ್ಷಣಿಕ ಚಟುವಟಿಕೆಗಳು ಕುಂಠಿತವಾಗಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಸೂಲಿ ದಂಧೆ ನಿರಾತಂಕವಾಗಿ ನಡೆದಿದೆ. ಶೈಕ್ಷಣಿಕ ಚಟುವಟಕೆಗಳು ಆರಂಭವಾಗುತ್ತಿದ್ದಂತೆ ಖಾಸಗಿ ಶಾಲೆಗಳು ಪೋಷಕರನ್ನು ಕಾಡಲಾರಂಭಿಸಿವೆ. ಕೆಲವು ಶಾಲೆಗಳು ಟೆಲಿಕಾಲರ್ ಕೇಂದ್ರಗಳ ಮೂಲಕ ಪೋಷಕರನ್ನು ಸೆಳೆಯಲು ಆರಂಭಿಸಿದ್ದರೆ, ಇನ್ನೂ ಕೆಲವು ಶಾಲೆಗಳು ಪೋಷಕರಿಗೆ ಸಾಲಸೌಲಭ್ಯ ಒದಗಿಸುವ ಮೂಲಕ ತಮ್ಮ ಖಜಾನೆ ತುಂಬಿಕೊಳ್ಳಲು ಪೋಷಕರನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ.

ಇನ್ನೂ ಕೆಲವು ಶಾಲೆಗಳು ಕಂತಿನ ರೂಪದಲ್ಲಿ ಶುಲ್ಕ ಪಾವತಿಯ ಸೌಲಭ್ಯ ನೀಡುವ ಮೂಲಕ ಹಂತ ಹಂತವಾಗಿ ವಸೂಲಿ ಆರಂಭಿಸಿವೆ.
ಶಿಕ್ಷಣ ಮತ್ತು ಆರೋಗ್ಯ ಜೀವನಾವಶ್ಯಕ ಮೂಲಭೂತ ಸೇವೆಗಳು. ಆರೋಗ್ಯ ಕ್ಷೇತ್ರ ಜನರನ್ನು ಹಿಂಡಿ ಹಿಪ್ಪೆ ಮಾಡಿದೆ. ಕೊರೊನಾ ಸರ್ಕಾರವನ್ನಷ್ಟೇ ಅಲ್ಲ ಜನ ಸಮುದಾಯವನ್ನುಆರ್ಥಿಕವಾಗಿ ಬರ್ಬಾದ್ ಮಾಡಿದೆ.

ಈ ನಡುವೆ ಶಿಕ್ಷಣ ಸಂಸ್ಥೆಗಳು ಪೋಷಕರನ್ನು ಪೆಡಂಭೂತದಂತೆ ಕಾಡಲಾರಂಭಿಸಿವೆ. ಜುಲೈನಿಂದ ಶಾಲೆಗಳು ಆರಂಭವಾಗುವ ಮುನ್ಸೂಚನೆಯನ್ನು ಸರ್ಕಾರ ನೀಡಿದೆ. ಅದಲ್ಲಿವರೆಗೂ ಆನ್ ಲೈನ್ ಕ್ಲಾಸ್ ನಡೆಯುತ್ತದೆ. ಹಾಗಾಗಿ ಪೂರ್ಣ ಪ್ರಮಾಣದ ಶುಲ್ಕ ಪಾವತಿಸಲೇಬೇಕು ಎಂದು ಶಾಲೆಗಳು ಒತ್ತಡ ಹೇರುತ್ತಿವೆ.

ಮೊದಲನೆ ತರಗತಿಯ ಪ್ರವೇಶಕ್ಕೆ ಕನಿಷ್ಠ 20 ಸಾವಿರದಿಂದ 2 ಲಕ್ಷ ರೂಪಾಯಿವರೆಗೂ ಡೋನೆಷನ್ ವಸೂಲಿ ಮಾಡಲಾಗುತ್ತಿದೆ. ಒಟ್ಟು ಹಣವನ್ನು ಮಾಸಿಕ ಆಥವಾ ತ್ರೈ ಮಾಸಿಕ ಕಂತುಗಳಲ್ಲಿ ಪಾವತಿಸುವ ಸೌಲಭ್ಯ ನೀಡಲಾಗುತ್ತಿದೆ. ಒಂದೇ ಕಂತಿನಲ್ಲಿ ಪಾವತಿಸುವವರಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.

ಮಧ್ಯಮ ವರ್ಗ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಆಶಾಭಾವನೆಯಿಂದ ಸ್ಟ್ಯಾಂಡರ್ಡ್ ಎನಿಸಿಕೊಳ್ಳುವ ಶಾಲೆಗಳಿಗೆ ಸೇರಿಸಿರುತ್ತಾರೆ. ಈವರೆಗೂ ಹೇಗೋ ದುಡಿಮೆ ಇತ್ತು, ಅಲ್ಲಿ ಶಿಕ್ಷಣ ಕೊಡಿಸುತ್ತಿದ್ದರು. ಕೊರೊನಾ ಲಾಕ್ ಡೌನ್ ಗಳಿಂದ ಜನರ ಆದಾಯ ಮಟ್ಟ ತೀವ್ರವಾಗಿ ಕುಸಿದು ಹೋಗಿದೆ. ಕೆಲವರಿಗೆ ಉದ್ಯೋಗ ನಷ್ಟವಾಗಿ ಆರ್ಥಿಕ ಸಂಪನ್ಮೂಲವೇ ಬರಿದಾಗಿದೆ.

ಆದರೆ ಭರವಸೆ ಕಳೆದುಕೊಳ್ಳುವಂತಿಲ್ಲ, ಮಕ್ಕಳ ಭವಿಷ್ಯವನ್ನು ಕಡೆಗಣಿಸುವಂತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಮಕ್ಕಳ ಶಿಕ್ಷಣವನ್ನು ಮುಂದುವರೆಸಲು ಪೋಷಕರು ಬಯಸುತ್ತಿದ್ದಾರೆ. ಅಂತಹ ಶಿಕ್ಷಕರನ್ನು ಗುರಿಯಾಗಿಸಿಕೊಂಡಿರುವ ಶಿಕ್ಷಣ ಸಂಸ್ಥೆಗಳು ಸಾಲ ಸೌಲಭ್ಯ ಒದಗಿಸಲು ಮುಂದಾಗಿವೆ. ಇದಕ್ಕಾಗಿ ನೆರೆಯ ರಾಜ್ಯಗಳಲ್ಲಿ ನೋಂದಣಿಯಾಗಿರುವ ಕೆಲವು ಫೈನಾಸ್ ಕಂಪೆನಿಗಳು ರಾಜ್ಯಕ್ಕೆ ಧಾಂಗುಡಿಯಿಟ್ಟಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿವೆ.

ವಿದ್ಯಾರ್ಥಿಗಳ ಟಿಸಿ, ಅಂಕಪಟ್ಟಿ ಸೇರಿ ದಾಖಲಾತಿಗಳನ್ನು ಸಾಲಕ್ಕೆ ಅಡಮಾನ ಮಾಡಿಕೊಳ್ಳಲಾಗುತ್ತಿದೆ. ವಿಚಿತ್ರವಾದ ಬೆಳವಣಿಗೆಯ ಬಗ್ಗೆ ಶಿಕ್ಷಣ ಇಲಾಖೆ ಕಂಡು ಕಾಣದಂತಿದೆ. ಪ್ರತಿವರ್ಷ ಶಿಕ್ಷಣ ಇಲಾಖೆ ಶೈಕ್ಷಣಿಕ ವರ್ಷದ ಬಹುತೇಕ ಚಟುವಟಿಕೆಗಳು ಮುಗಿದ ಬಳಿಕ ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಿನಲ್ಲಿ ಕಾಟಚಾರಕ್ಕೆ ಎಂಬಂತೆ ಒಂದು ಸುತ್ತೋಲೆ ಹೊರಡಿಸಿ ಖಾಸಗಿ ಶಾಲೆಗಳು ಅನಧಿಕೃತವಾಗಿ ಶುಲ್ಕ ವಸೂಲಿ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡುತ್ತದೆ. ಆ ವೇಳೆಗೆ ಎಲ್ಲವೂ ಮುಗಿದು ಹೋಗಿರುತ್ತದೆ.

ಒಂದು ವೇಳೆ ಇನ್ನೂ ವಸೂಲಿ ನಡೆಯುತ್ತಿದ್ದರೂ ತಮ್ಮ ಮಕ್ಕಳು ಓದುವ ಶಾಲೆಯ ವಿರುದ್ಧ ದೂರು ನೀಡಲು ಯಾವ ಪೋಷಕರು ಮುಂದೆ ಬರುವುದಿಲ್ಲ. ಇದೇ ಭಯವನ್ನು ಬಂಡವಾಳ ಮಾಡಿಕೊಂಡ ಶಿಕ್ಷಣ ಸಂಸ್ಥೆಗಳು ತಮ್ಮ ವಸೂಲಿಗೆ ಬಳಕೆ ಮಾಡಿಕೊಳ್ಳುತ್ತಿವೆ.

ಎಲ್ಲಾ ಶಾಲೆಗಳು ಹಣದಾಹಿಗಳಾಗಿವೆ ಎಂದು ಹೇಳಲಾಗುವುದಿಲ್ಲ. ಕೆಲವು ಶಾಲೆಗಳು ಪ್ರಾಮಾಣಿಕವಾಗಿ ಶಿಕ್ಷಣ ಸೇವೆ ನೀಡುತ್ತಿವೆ. ಅಂತಹ ಶಾಲೆಗಳು ಶಿಕ್ಷಕರ ವೇತನ ಹಾಗೂ ಸಣ್ಣಪುಟ್ಟ ಖರ್ಚುಗಳಿಗೆ ಹೊಂದಾಣಿಕೆಯಾಗುವಂತೆ ಶುಲ್ಕ ಪಡೆಯುತ್ತಿವೆ. ದುರಂತವೆಂದರೆ ಅಂತಹ ಶಾಲೆಗಳಿಗೆ ಅಧಿಕಾರಿಗಳು ಅನಗತ್ಯ ಕಿರುಕೂಳ ನೀಡುತ್ತಿದ್ದಾರೆ.

ಹಣ ವಸೂಲಿಯನ್ನೇ ದಂಧೆ ಮಾಡಿಕೊಂಡಿರುವ ಪ್ರಭಾವಿ ಶಾಲೆಗಳ ಬಗ್ಗೆ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ, ಕಂಡು ಕಾಣದಂತೆ ಕಣ್ಣುಮುಚ್ಚಿಕುಳಿತು ಬಿಟ್ಟಿದ್ದಾರೆ.

Facebook Comments