ಮಾತು ತಪ್ಪಿದ ಖಾಸಗಿ ಆಸ್ಪತ್ರೆಗೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.8-ಈ ಹಿಂದೆ ಕೊಟ್ಟ ಮಾತಿನಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರು ಸರ್ಕಾರಕ್ಕೆ ನೀಡಬೇಕಾದ ಹಾಸಿಗೆಗಳನ್ನು ಕೊಡದಿದ್ದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಮುಂದಾಗಿದೆ.

ಈ ಸಂಬಂಧ ಇಂದು ಸಂಜೆ ಮತ್ತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅಧ್ಯಕ್ಷತೆಯಲ್ಲಿ ಖಾಸಗಿ ಆಸ್ಪತ್ರೆಗಳ ಮಾಲೀಕರ ಸಭೆಯನ್ನು ಕರೆಯಲಾಗಿದೆ.

ಒಂದು ವೇಳೆ ಹೇಳಿದಂತೆ ಹಾಸಿಗೆಗಳನ್ನು ನೀಡದಿದ್ದರೆ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವ ಸುಳಿವನ್ನು ಸರ್ಕಾರ ನೀಡಿದೆ.ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಇಂದು ಬೆಳ್ಳಂಬೆಳಗ್ಗೆ ತಮ್ಮ ನಿವಾಸ ಕಾವೇರಿಯಲ್ಲಿ ಸಚಿವರು ಮತ್ತು ಅಧಿಕಾರಿಗಳ ತುರ್ತು ಸಭೆ ನಡೆಸಿದರು.

ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಖಾಸಗಿ ಆಸ್ಪತ್ರೆಗಳು ಸರ್ಕಾರಕ್ಕೆ ನೀಡಿದ ವಾಗ್ದಾನದಂತೆ ಹಾಸಿಗೆಗಳನ್ನು ನೀಡದಿರುವುದಕ್ಕೆ ಖುದ್ದು ಸಿಎಂ ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಿಂದೆ ನಡೆದ ಸಭೆಯಲ್ಲಿ ಖಾಸಗಿ ಆಸ್ಪತ್ರೆ ಮಾಲೀಕರು ಸರ್ಕಾರಕ್ಕೆ ನಾಲ್ಕೂವರೆ ಸಾವಿರ ಹಾಸಿಗೆಗಳನ್ನು ನೀಡಲು ಒಪ್ಪಿಕೊಂಡಿದ್ದರು. ಸಭೆ ನಡೆದು ಹಲವು ದಿನಗಳಾದರೂ ಮಾತಿನಿಂದ ಹಿಂದೆ ಸರಿದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಖಾಸಗಿ ಆಸ್ಪತ್ರೆಯವರು 4,500 ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಮಂಡಳಿಯವರು 2,500 ಸೇರಿದಂತೆ ಒಟ್ಟು 7 ಸಾವಿರ ಹಾಸಿಗೆಗಳನ್ನು ನೀಡುವುದಾಗಿ ಒಪ್ಪಿಕೊಂಡಿದ್ದರು.ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಆಸ್ಪತ್ರೆಯವರು ಕಳ್ಳಾಟ ನಡೆಸುತ್ತಿದ್ದಾರೆ. ಈಗಾಗಲೇ ಮೂರು ಬಾರಿ ಸಭೆ ನಡೆಸಲಾಗಿದೆ. ಪ್ರತಿ ಬಾರಿ ಕೊಡುತ್ತೇವೆ ಎಂದು ಹೇಳಿ ಮಾತು ತಪ್ಪುತ್ತಿದ್ದಾರೆ.

ಇಂದು ಸಂಜೆ ನೀವು ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ಸಭೆ ನಡೆಸಿ ಒಪ್ಪಂದದಂತೆ ಹಾಸಿಗೆಗಳನ್ನು ನೀಡಲೇಬೇಕು. ಒಂದು ವೇಳೆ ಅವರು ಮಾತಿಗೆ ತಪ್ಪಿದರೆ ಮುಂದೆ ಏನು ಕ್ರಮ ಜರುಗಿಸಬೇಕು ಅದನ್ನು ಮಾಡೋಣ ಎಂದು ಸಿಎಂ ಸಚಿವರಿಗೆ ಸೂಚಿಸಿದ್ದಾರೆ.

ಮೊದಲು ಮನವೊಲಿಸುವುದು ಇಲ್ಲದಿದ್ದರೆ ಕಾನೂನು ಅಸ್ತ್ರ ಬಳಸಬೇಕೆಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಕಾಯ್ದೆಯಡಿ ಆಸ್ಪತ್ರೆಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಇಲ್ಲವೇ ಇಡೀ ಆಸ್ಪತ್ರೆಗಳನ್ನೇ ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವುದು, ಇಲ್ಲದಿದ್ದರೆ ಅಂತಹ ಆಸ್ಪತ್ರೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ರದ್ದು ಪಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಇಂದು ಸಂಜೆ ಸಚಿವ ಸುಧಾಕರ್ ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ನಡೆಸುವ ಸಭೆಗಳ ಮೇಲೆ ಸರ್ಕಾರ ಮುಂದಿನ ತೀರ್ಮಾನ ಕೈಗೊಳ್ಳಲಿದೆ.

Facebook Comments