ರಾಜ್ಯದಲ್ಲಿ ಮತ್ತೆ ಶಾಲಾ ಶುಲ್ಕದ ಗೊಂದಲ, ಪೋಷಕರು-ಶಾಲೆಗಳ ನಡುವೆ ತಿಕ್ಕಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಶಾಲಾ ಶುಲ್ಕದ ವಿಚಾರದಲ್ಲಿ ಮತ್ತೊಮ್ಮೆ ಗೊಂದಲ ಏರ್ಪಟ್ಟಿದೆ. 2021-22 ನೇ ಶೈಕ್ಷಣಿಕ ಸಾಲಿನ ದಾಖಲಾತಿ ಪ್ರಕ್ರಿಯೆ ಜೂ. 14 ರಿಂದ ನಡೆಸಲು ಶಿಕ್ಷಣ ಇಲಾಖೆ ಆದೇಶಿಸಿದೆ. ಇದೀಗ ಖಾಸಗಿ ಶಾಲೆಗಳಲ್ಲಿ ಅದಾಗಲೇ ದಾಖಲಾತಿ ಪ್ರತಿಕ್ರಿಯೆ ಆರಂಭವಾಗಿದೆ. ಹಳೇ ಶುಲ್ಕದ ಗೊಂದಲದ ನಡುವೆ ಇದೀಗ ನೂತನ ಶೈಕ್ಷಣಿಕ ವರ್ಷದ ಶಾಲಾ ಶುಲ್ಕದಲ್ಲಿ ಪೋಷಕರು ಹಾಗೂ ಶಾಲೆಗಳ ನಡುವೆ ತಿಕ್ಕಾಟ ಏರ್ಪಟ್ಟಿದೆ.

ಕೋವಿಡ್ 19 ಹಿನ್ನೆಲೆಯಲ್ಲಿ ಶಾಲಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತಗೊಳಿಸಬೇಕು ಎಂದು ಶಿಕ್ಷಣ ಸಚಿವರು ಆದೇಶಿಸಿದ್ದರು. ಶಿಕ್ಷಣ ಇಲಾಖೆಯ ಈ ಆದೇಶವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿವೆ.  ಪರಿಸ್ಥಿತಿ ಹೀಗಿರುವವಾಗಲೇ 2021-22 ನೇ ಶೈಕ್ಷಣಿಕ ಸಾಲಿನಲ್ಲಿ ಸಹ ಶೇ. 30 ರಷ್ಟು ಕಡಿಮೆ ಮಾಡಬೇಕಾ? ಬೇಡವೇ? ಎಂಬುದರ ಬಗ್ಗೆ ಮತ್ತೆ ವಿವಾದ ಏರ್ಪಟ್ಟಿದೆ.

ಕಳೆದ ವರ್ಷದಂತೆ ಈ ವರ್ಷವೂ ಶಾಲಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿಮೆ ಮಾಡಲಾಗಿದೆ ಎಂದು ಅಧಿಕಾರಿಗಳು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ತಿರುಗಿ ಬಿದ್ದಿವೆ. ಮಾತ್ರವಲ್ಲ, ಶಾಲೆ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹಾಕುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆಗಳು ಶಿಕ್ಷಣ ಸಚಿವರಿಗೆ ದೂರು ನೀಡಿವೆ. ಈ ಎಲ್ಲಾ ಬೆಳವಣಿಗೆ ರಾಜ್ಯದಲ್ಲಿ ಮತ್ತೆ ಶಾಲಾ ಶುಲ್ಕದಲ್ಲಿ ಗೊಂದಲ ಸೃಷ್ಟಿಸುವ ವಾತಾವರಣ ನಿರ್ಮಾಣವಾಗಿದೆ.

ಕೊರೊನಾ ಸೋಂಕುಗೆ ಎಲ್ಲಾ ಕ್ಷೇತ್ರಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಸಂಕಷ್ಟಕ್ಕೆ ಒಳಗಾಗಿದ್ದವು. ದಾಖಲಾತಿ ಇಲ್ಲದೇ, ಶಾಲಾ ಶುಲ್ಕ ಪಾವತಿಸದೇ ಸಂಕಷ್ಟಕ್ಕೆ ಈಡಾಗಿದ್ದವು. ಬದುಕು ಕಳೆದುಕೊಂಡ ಪೋಷಕರು ಕೂಡ ಶಾಲಾ ಶುಲ್ಕ ಕಟ್ಟಲಾರದ ಸ್ಥಿತಿ ತಲುಪಿದರು. ಇದು ರಾಜ್ಯದಲ್ಲಿ ದೊಡ್ಡ ವಿವಾದಕ್ಕೆ ನಾಂದಿ ಹಾಡಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಶಿಕ್ಷಣ ಸಚಿವರು ಶಾಲೆಗಳು ಬೋಧನಾ ಶುಲ್ಕ ಹೊರತು ಪಡಿಸಿ ಯಾವುದೇ ಶುಲ್ಕ ಸ್ವೀಕರಿಸಬಾರದು.

ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತ ಮಾಡಬೇಕು ಎಂದು ಆದೇಶ ನೀಡಿದರು. ವೈಜ್ಞಾನಿಕ ನೆಲೆಗಟ್ಟಿನಲ್ಲಿ ಶೇ. ಇಂತಿಷ್ಟು ಶುಲ್ಕ ಮನ್ನಾಗೆ ಮನವಿ ಮಾಡಿದ್ದಲ್ಲಿ ಶಾಲಾ ಶುಲ್ಕದಲ್ಲಿ ಗೊಂದಲ ಏರ್ಪಡುತ್ತಿರಲಿಲ್ಲ. ಶಿಕ್ಷಣ ಸಚಿವರು ಯಾವ ಮಾನದಂಡ ಅನುಸರಿಸದೇ ಬೋಧನಾ ಶುಲ್ಕದಲ್ಲಿ ಶೇ. 30 ರಷ್ಟು ಕಡಿತಗೊಳಿಸಬೇಕು ಎಂಬ ತೀರ್ಮಾನ ಪ್ರಕಟಿಸಿದರು. ಈ ತೀರ್ಮಾನದ ವಿರುದ್ಧ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಹೈಕೋರ್ಟ್ ಮೊರೆ ಹೋದವು.

ಶುಲ್ಕದ ವಿಚಾರವಾಗಿ ಮಧ್ಯಂತರ ತೀರ್ಪು ನೀಡಿರುವ ಹೈಕೋರ್ಟ್, ರಾಜ್ಯದಲ್ಲಿ ಶಾಲಾ ಶುಲ್ಕದ ಬಗ್ಗೆ ಏನೇ ಗೊಂದಲ ಇದ್ದರೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಅದಕ್ಕೆ ತೃಪ್ತರಾಗದಿದ್ದಲ್ಲಿ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿತು.

ಕಳೆದ ವರ್ಷದ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ನೀಡಿದ್ದ ಆದೇಶದಲ್ಲಿ 2021- 22 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟ ಆದೇಶ ಮಾಡಿಲ್ಲ. ಕೇವಲ ಒಂದು ವರ್ಷಕ್ಕೆ ಸೀಮಿತಗೊಳಿಸಿ ಹೊರಡಿಸಿರುವ ಆದೇಶ ಮುಂದಿಟ್ಟುಕೊಂಡು ಶಿಕ್ಷಣ ಇಲಾಖೆ ಅಧಿಕಾರಿಗಳು ಇದೀಗ ಈ ವರ್ಷವೂ ಶೇ. 30 ರಷ್ಟು ಶಾಲಾ ಶುಲ್ಕ ಕಡಿತಗೊಳಿಸಬೇಕೆಂದು ಶಾಲೆಗಳಿಗೆ ಸೂಚನೆ ನೀಡಿದ್ದಾರೆ.

2021-22 ನೇ ಶೈಕ್ಷಣಿಕ ಸಾಲಿನ ಶಾಲಾ ಶುಲ್ಕದ ಬಗ್ಗೆ ಸರ್ಕಾರ ಈವರೆಗೂ ಯವುದೇ ತೀರ್ಮಾನ ಪ್ರಕಟಿಸಿಲ್ಲ. ಕಳೆದ ವರ್ಷದ ಆದೇಶದಲ್ಲೂ ಉಲ್ಲೇಖವಿಲ್ಲ. ಸಂಬಂಧವಿಲ್ಲದ ಆದೇಶವನ್ನು ಮುಂದಿಟ್ಟುಕೊಂಡು ಶಾಲಾ ಆಡಳಿತ ಮಂಡಳಿ ವಿರುದ್ಧ ಕೇಸು ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯಿಂದ ಜನ ಸಾಮಾನ್ಯರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಒಂದಡೆ ಗುಣಮಟ್ಟದ ಶಿಕ್ಷಣಕ್ಕಾಗಿ ಖಾಸಗಿ ಶಾಲೆಗಳಿಗೆ ಸೇರಿಸಬೇಕೆಂಬ ತವಕ.

ಆದರೆ ಶಾಲಾ ಶುಲ್ಕ ಕಟ್ಟಲಾರದ ಪರಿಸ್ಥಿತಿ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಶಿಕ್ಷಣ ಸಚಿವರು ತಮ್ಮ ಅತಿ ಕ್ಷಾಣಾಕ್ಷತೆ ಪ್ರಯೋಗಿಸಿ ದೆಹಲಿ ಮಾದರಿಯಲ್ಲಿ ಒಂದು ಸಾವಿರ ಶಾಲೆಗಳನ್ನು ಕರ್ನಾಟಕದಲ್ಲಿ ತೆರೆದು ಗುಣಮಟ್ಟದ ಶಿಕ್ಷಣಕ್ಕೆ ನಾಂದಿಯಾಡಬಹುದಿತ್ತು.

ಆದರೆ, ಒಂದು ಶಾಲೆಯನ್ನು ತೆರೆಯುವ ಗೋಜಿಗೆ ಹೋಗಿಲ್ಲ. ಹಾಗಂತ ಇರುವ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳದೇ, ಅತ್ತ ಖಾಸಗಿ ಶಿಕ್ಷಣ ವ್ಯವಸ್ಥೆಯ ಶತ್ರವೂ ಅಲ್ಲ, ಇತ್ತ ಸರ್ಕಾರಿ ವ್ಯವಸ್ಥೆಯ ಮಿತ್ರನೂ ಆಗದಂತೆ ಅಡ್ಡಗೋಡೆ ಮೇಲೆ ದೀಪ ಇಟ್ಟಿದ್ದಾರೆ.

Facebook Comments

Sri Raghav

Admin