ತರಗತಿ ಆರಂಭಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ಗರಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21- ಇಂದಿನಿಂದ ಕೇಂದ್ರ ಸರ್ಕಾರ 9 ರಿಂದ 12ನೆ ತರಗತಿಗಳನ್ನು ಆರಂಭಿಸಲು ಸೂಚನೆ ನೀಡಿದ ಹೊರತಾಗಿಯೂ ವಿದ್ಯಾರ್ಥಿಗಳನ್ನು ಶಾಲೆಯಿಂದ ದೂರ ಇಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಾಸಗಿ ಶಾಲೆಗಳು ವ್ಯಾಪಕ ವಿರೋಧ ವ್ಯಕ್ಯಪಡಿಸಿವೆ.

ಈ ಹಿಂದೆ ಇಂದಿನಿಂದ ಶಾಲೆಗಳನ್ನು ತೆರೆದು 9 ರಿಂದ 12 ತರಗತಿ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. ಆದರೆ, ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದೆ.

ಇದೇ ವಿಚಾರವಾಗಿ ನಿರ್ಧಾರ ಕೈಗೊಂಡಿರುವ ಕರ್ನಾಟಕ ಸರ್ಕಾರ 9 ರಿಂದ 12ನೆ ತರಗತಿಗಳ ಶಾಲೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಸರ್ಕಾರ ಈ ಕ್ರಮ ಕೈಗೊಂಡಿತ್ತು. ಸರ್ಕಾರದ ನಿರ್ಧಾರಕ್ಕೆ ಇದೀಗ ಖಾಸಗಿ ಶಾಲೆಗಳ ತೀವ್ರ ವಿರೋಧ ವ್ಯಕ್ತವಾಗುತ್ತಿವೆ.

ಈ ಬಗ್ಗೆ ಮಾತನಾಡಿರುವ ಕರ್ನಾಟಕದ ಇಂಗ್ಲಿಷ್ ಮಧ್ಯಮ ಶಾಲೆಗಳ ನಿರ್ವಹಣಾ ಮಂಡಳಿಯ ಶಶಿಕುಮಾರ್ ಅವರು, ವಿದ್ಯಾರ್ಥಿಗಳನ್ನು ಶಾಲೆಗಳಿಂದ ದೂರ ಇಡುವ ಸರ್ಕಾರದ ನಿರ್ಧಾರ ಸರಿಯಲ್ಲ. ಸ್ವತಃ ಕೇಂದ್ರ ಸರ್ಕಾರವೇ ವಿದ್ಯಾರ್ಥಿಗಳ ಶಾಲೆ ಪ್ರವೇಶಕ್ಕೆ ಅವಕಾಶ ನೀಡಿದೆ.

ಆದರೆ, ರಾಜ್ಯ ಸರ್ಕಾರ ಮಾತ್ರ ಕೊನೆಯ ಕ್ಷಣದಲ್ಲಿ ಅನುಮತಿ ನಿರಾಕರಿಸಿದೆ. ಸೆಪ್ಟೆಂಬರ್ ಅಂತ್ಯದವರೆಗೂ ರಾಜ್ಯದಲ್ಲಿ ಯಾವುದೇ ಶಾಲೆ ಪ್ರಾರಂಭಿಸಲ್ಲ ಎಂದು ಶಿಕ್ಷಣ ಇಲಾಖೆ ಹೇಳಿದೆ. ಖಾಸಗಿ ಶಾಲೆಗಳು ಶಾಲೆ ಪುನಾರಂಭಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿವೆ.

ಹಲವಾರು ಶಾಲೆಗಳು ಈಗಾಗಲೇ ಶಾಲಾ ಆವರಣವನ್ನು ಸ್ಯಾನಿಟೈಸ್ ಮಾಡಲು, ಶಿಕ್ಷಕರನ್ನು ಸಿದ್ಧಪಡಿಸಲು ಮತ್ತು ಪೋಷಕರಿಂದ ಅನುಮೋದನೆ ಪತ್ರಗಳನ್ನು ಪಡೆಯಲು ಸಾವಿರಾರು ರೂ.ಗಳನ್ನು ಖರ್ಚು ಮಾಡಿವೆ. ಸರ್ಕಾರದ ವಿದ್ಯಾಗಾಮ ಯೋಜನೆಯಿಂದ ಖಾಸಗಿ ಶಾಲೆಗಳ ಆದಾಯಕ್ಕೆ ಕೊಡಲಿ ಪೆಟ್ಟು ಬೀಳಲಿದ್ದು, ಇದರಿಂದ ಖಾಸಗಿ ಶಾಲೆಗಳಿಗೆ ಅನಾನುಕೂಲವಾಗಲಿದೆ. ವಿದ್ಯಾರ್ಥಿಗಳನ್ನು ವಿದ್ಯಾಗಾಮ ಯೋಜನೆಯತ್ತ ಆಕರ್ಷಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇನ್ನು ವಿದ್ಯಾಗಾಮ ಯೋಜನೆ ಮೂಲಕ ಸರ್ಕಾರ ಶಿಕ್ಷಕರನ್ನೇ ವಿದ್ಯಾರ್ಥಿಗಳ ಬಳಿಗೆ ಕಳುಹಿಸಿ ಬಯಲಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಲಾಗುತ್ತದೆ. ಇದು ಖಾಸಗಿ ಶಾಲೆಗಳ ಕೆಂಗಣ್ಣಿಗೆ ಗುರಿಯಾಗಿದೆ.

ಈ ಹಿಂದೆ ಇಂದಿನಿಂದ ದೇಶಾದ್ಯಂತ 9 ರಿಂದ 12ನೆ ತರಗತಿ ಶಾಲಾ-ಕಾಲೇಜು ಆರಂಭಕ್ಕೆ ನೂತನ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಅದರಂತೆ ರಾಜ್ಯದ ಸರ್ಕಾರವೂ ಸಹ ಸೆಪ್ಟೆಂಬರ್ 21ರಿಂದ 9, 10 ಹಾಗೂ 11, 12ನೆ ತರಗತಿ ಪ್ರಾರಂಭಿಸಲು ರಾಜ್ಯ ಶಿಕ್ಷಣ ಇಲಾಖೆ ಮುಂದಾಗಿತ್ತು. ಇದೀಗ ಏಕಾಏಕಿ ತನ್ನ ನಿರ್ಧಾರವನ್ನು ವಾಪಸ್ ಪಡೆದಿದೆ.

Facebook Comments