ಖಾಸಗಿ ಶಾಲೆಗಳ ಆನ್‍ಲೈನ್ ತರಗತಿ ಅಬಾಧಿತ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.27- ಖಾಸಗಿ ಶಾಲೆಗಳು ನಡೆಸುತ್ತಿರುವ ಆನ್‍ಲೈನ್ ಶಿಕ್ಷಣ ಮುಂದುವರೆಯಲಿದೆ. ಯಾವುದೇ ಕಾರಣಕ್ಕೂ ಅದು ಸ್ಥಗಿತಗೊಳ್ಳುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬುಕುಮಾರ್ ಭರವಸೆ ನೀಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಜತೆ ಇಂದು ಸಭೆ ನಡೆಸಿದ ಅವರು, ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಿದರು.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳು ಮುಚ್ಚಿದ್ದು, ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳಿಗೆ ಆನ್‍ಲೈನ್‍ನಲ್ಲಿ ಬೋಧನೆ ಮಾಡುತ್ತಿವೆ. ಶುಲ್ಕ ಕಟ್ಟದೇ ಇರುವ ವಿದ್ಯಾರ್ಥಿಗಳಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‍ಲೈನ್‍ನಿಂದ ಹೊರಗಿಟ್ಟಿದ್ದವು.

ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರು ಶುಲ್ಕ ಕಟ್ಟದೇ ಇರುವ ವಿದ್ಯಾರ್ಥಿಗಳನ್ನು ಆನ್‍ಲೈನ್‍ನಿಂದ ಹೊರಗೆ ಇಡುವಂತಿಲ್ಲ. ಶುಲ್ಕ ಕಟ್ಟಿ ಎಂಬ ಒತ್ತಡ ಹಾಕುವಂತಿಲ್ಲ, ಅನುತೀರ್ಣಗೊಳಿಸುವಂತಿಲ್ಲ ಎಂದಿದ್ದರು. ಇದರಿಂದ ಗರಂ ಆಗಿರುವ ಖಾಸಗಿ ಆಡಳಿತ ಶಿಕ್ಷಣ ಸಂಸ್ಥೆಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಇಂದು ಅನ್ಬುಕುಮಾರ್ ಅವರು ಸಭೆ ನಡೆಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳ ಅಹವಾಲು ಕೇಳಿದ್ದಾರೆ.

ಶಾಲಾ ವಾಹನಗಳ ಬಂಡವಾಳ, ಶಿಕ್ಷಕರ ವೇತನ ಸೇರಿದಂತೆ ಹಲವಾರು ಆರ್ಥಿಕ ಹೊರೆ ಬಗ್ಗೆ ಆಡಳಿತ ಮಂಡಳಿಯವರು ಹೇಳಿಕೊಂಡಿದ್ದಾರೆ.
ನಮ್ಮ ಸಮಸ್ಯೆಗಳನ್ನು 15 ದಿನದೊಳಗೆ ಬಗೆಹರಿಸದಿದ್ದರೆ ಪ್ರತಿಭಟನೆಯ ಮಾರ್ಗ ಹಿಡಿಯಬೇಕಾಗುತ್ತದೆ ಎಂದು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿವೆ.

Facebook Comments