ಫೀಸ್ ಹೆಸರಲ್ಲಿ ಜನರ ರಕ್ತ ಹೀರುತ್ತಿವೆ ಖಾಸಗಿ ಶಾಲೆಗಳು..! ಸರ್ಕಾರ ಮಾತ್ರ ಸೈಲೆಂಟ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.9- ಕೊರೊನಾ ಸೋಂಕು-ಸಾವುಗಳ ಗ್ರಾಫ್ ದಿನೇ ದಿನೇ ಏರುತ್ತಲೇ ಇದೆ. ಸಮಾಜದ ಆರೋಗ್ಯದ ಸ್ವಾಸ್ಥ್ಯ ಆತಂಕದಲ್ಲಿದೆ. ಶಾಲೆಗಳನ್ನು ಪ್ರಾರಂಭ ಮಾಡಬೇಕೆ; ಬೇಡವೇ ಎಂಬ ಸಂದಿಗ್ಧತೆಯಲ್ಲಿ ಸರ್ಕಾರವಿದೆ. ಈ ನಡುವೆ ಖಾಸಗಿ ಶಾಲೆಗಳು ಆನ್‍ಲೈನ್ ಶಿಕ್ಷಣ ನೆಪದಲ್ಲಿ ಪಾಲಕರನ್ನು ಶೋಷಿಸುವ ಕೆಲಸಕ್ಕೆ ಮುಂದಾಗಿವೆ.

ಆಗಸ್ಟ್ 15ರ ನಂತರ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆಯಾದರೂ ಖಾಸಗಿ ಶಿಕ್ಷಣ ಸಂಸ್ಥೆಗಳ ಧನದಾಹಕ್ಕೆ ಮಾತ್ರ ಕಡಿವಾಣ ಬಿದ್ದಿಲ್ಲ. ರಾಜ್ಯದಲ್ಲಿರುವ ಬಹುತೇಕ ಶಿಕ್ಷಣ ಸಂಸ್ಥೆಗಳು ಈಗಾಗಲೇ ವಸೂಲಾತಿಗೆ ಇಳಿದಿವೆ. ಎಲ್ಲಾ ಪೋಷಕರಿಗೂ ವಾಟ್ಸಾಪ್, ಇ-ಮೇಲ್‍ಗಳ ಮೂಲಕ ಶುಲ್ಕ ವಿವರಗಳನ್ನು ರವಾನಿಸಿ ಆನ್‍ಲೈನ್‍ನಲ್ಲಿ ತರಗತಿಗಳು ಆರಂಭವಾಗಿವೆ.

ಶುಲ್ಕ ಪಾವತಿಸಿ ಆನ್‍ಲೈನ್ ಶಿಕ್ಷಣ ಪಡೆಯಿರಿ ಎಂಬ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಈಗಾಗಲೇ ಕೊರೊನಾ ಹೊಡೆತದಿಂದ ಇಡೀ ಸಮಾಜದ ಆರ್ಥಿಕ ವ್ಯವಸ್ಥೆ ಇನ್ನಿಲ್ಲದಂತೆ ಹದಗೆಟ್ಟಿದ್ದು, ಬಹುತೇಕ ಪೋಷಕರು ಶಾಲೆಗಳಿಗೆ ಶುಲ್ಕ, ಡೊನೇಷನ್‍ಗಳನ್ನು ಮಾಮೂಲಿನಂತೆ ಪಾವತಿಸಲು ಸಾಧ್ಯವಾಗುತ್ತಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವೇನಾದರೂ ನೆರವಿಗೆ ಬರಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ ಎಂದು ಸರ್ಕಾರ ಖಾಸಗಿಯವರಿಗೆ ಕಟ್ಟಪ್ಪಣೆ ಮಾಡಿದೆ. ಆದರೆ, ಖಾಸಗಿಯವರು ಈ ಯಾವ ನಿಯಮವನ್ನು ಕಿವಿ ಮೇಲೆ ಹಾಕಿಕೊಳ್ಳದೆ ಶುಲ್ಕ ವಸೂಲಿಯೇ ನಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ದಿನಕ್ಕೊಂದು ನಿಯಮವನ್ನು ಮಾಡಿಕೊಂಡು ಪೋಷಕರಿಂದ ಸುಲಿಗೆಗೆ ಇಳಿದಿದ್ದಾರೆ.

ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೆ ಮೊಬೈಲ್‍ಗಳಿಗೆ ಸಂದೇಶಗಳು ರವಾನೆಯಾಗುತ್ತಿವೆ. ನರ್ಸರಿಯಿಂದ ಹಿಡಿದು ಹತ್ತನೆ ತರಗತಿಯವರೆಗೆ ಶಾಲೆಗಳು ಆರಂಭವಾಗಿದ್ದು, ಪೋಷಕರು ಬಂದು ಫೀಸ್ ಕಟ್ಟಿ ಆನ್‍ಲೈನ್ ಲಿಂಕ್ ಪಡೆದು ಆನ್‍ಲೈನ್‍ನಲ್ಲಿ ತರಗತಿಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಆದೇಶ ನೀಡಿಲ್ಲ. ಯಾವ ಮಾರ್ಗಸೂಚಿಯನ್ನು ಹೊರಡಿಸಿಲ್ಲ. ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಆನ್‍ಲೈನ್ ನೆಪದಲ್ಲಿ ನಮ್ಮ ಬಳಿ ಹಣ ಪೀಕುವ ಕೆಲಸ ಮಾಡುತ್ತಿದ್ದಾರೆ ಎಂದು ಹಲವು ಪೋಷಕರು ಅಲವತ್ತುಕೊಂಡಿದ್ದಾರೆ. ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳವರು ಈಗಾಗಲೇ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಶುಲ್ಕಗಳ ವಿವರ ರವಾನಿಸಿದ್ದು, ನಿಗದಿತ ಸಮಯವನ್ನು ಹೇರಿದೆ. ಅದರೊಳಗೆ ಶುಲ್ಕ ಪಾವತಿಸದಿದ್ದರೆ ದಂಡವನ್ನೂ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಿವೆ.

ಆದರೆ, ಜನಸಾಮಾನ್ಯರ ಪಾಡು ಕೊರೊನಾದಿಂದ ಸಂಕಷ್ಟಕ್ಕೀಡಾಗಿದೆ. ಕೊರೊನಾಘಾತದಿಂದ ಕಳೆದ ಮೂರು ತಿಂಗಳುಗಳಿಂದ ದೇಶಾದ್ಯಂತ ಲಾಕ್‍ಡೌನ್ ಹಿನ್ನೆಲೆ ಬಹುತೇಕ ಮಧ್ಯಮ ವರ್ಗ ಹಾಗೂ ಬಡಜನರು ಅಕ್ಷರಶಃ ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಅನೇಕರು ಕೆಲಸ ಕಳೆದುಕೊಂಡು ಮನೆಯಲ್ಲೇ ಉಳಿಯುವಂತಾಗಿದೆ.

ಬದುಕಿನ ಬಂಡಿ ಎಳೆಯುವುದೇ ಈ ವಿಷಮ ಪರಿಸ್ಥಿತಿಯಲ್ಲಿ ಅವರಿಗೆ ಕಠಿಣ ಸವಾಲೆನಿಸಿದೆ. ಪರಿಸ್ಥಿತಿ ಹೀಗಿರುವಾಗ ಖಾಸಗಿ ಶಾಲೆಗಳು ಮಧ್ಯಮ ಹಾಗೂ ಬಡ ಮಕ್ಕಳ ಪೋಷಕರ ಸ್ಥಿತಿಗೆ ಒಂದಿನಿತು ಕರುಣೆಯ ದೃಷ್ಟಿ ಬೀರುವ ಬದಲಿಗೆ ಅವರನ್ನು ಡೊನೇಷನ್ ನೆಪದಲ್ಲಿ ಮತ್ತಷ್ಟು ಹಿಂಡಿ ಹಿಪ್ಪೆ ಮಾಡುವ ಕೆಲಸಕ್ಕೆ ಕೈ ಹಾಕಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.

ಇದಿಷ್ಟೇ ಅಲ್ಲ; ಇಲ್ಲಿಯವರೆಗೆ ಖಾಸಗಿ ಶಾಲೆಗಳು ಕಟ್ಟಡ ಅಭಿವೃದ್ಧಿ ಶುಲ್ಕ, ಟ್ಯೂಷನ್, ಕ್ರೀಡೆ, ಸಾಂಸ್ಕøತಿಕ ಚಟುವಟಿಕೆ, ಸಮವಸ್ತ್ರ, ಪುಸ್ತಕ ಎಂದೆಲ್ಲಾ ಶುಲ್ಕ ವಿಧಿಸುತ್ತಿದ್ದರು. ಇದೀಗ ಕೆಲ ಶಾಲೆಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನ್‍ಲೈನ್ ತರಗತಿ ಶುಲ್ಕ, ಮಾಸ್ಕ್ ಶುಲ್ಕ, ಸ್ಯಾನಿಟೈಸರ್ ಎಂದು ಇನ್ನಷ್ಟು ಸುಲಿಗೆಗೆ ನಿಂತಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.

ಖಾಸಗಿ ಶಾಲೆಗಳು ಆನ್‍ಲೈನ್ ತರಗತಿಗಳನ್ನೇನೋ ಆರಂಭಿಸಿವೆ. ಆದರೆ ಈ ತರಗತಿಗಳಲ್ಲಿ ಪಾಲ್ಗೊಳ್ಳಲು ಲ್ಯಾಪ್‍ಟ್ಯಾಪ್, ಸ್ಮಾರ್ಟ್ ಪೋನ್ ಬೇಕು. ಇವುಗಳ ಬೆಲೆಯೂ ಕಡಿಮೆಯೇನಲ್ಲ. ಮೊದಲೇ ಆರ್ಥಿಕ ಜರ್ಜರಿತಕ್ಕೆ ಒಳಗಾಗಿರುವ ಪೋಷಕರು ಹೆಚ್ಚುವರಿಯಾಗಿ ಲ್ಯಾಪ್‍ಟಾಪ್, ಸ್ಮಾರ್ಟ್‍ಪೋನ್ ಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕಿರುವುದು ದುರಂತವೇ ಸರಿ.

ಖಾಸಗಿ ಶಾಲೆಗಳು ಪೋಷಕರನ್ನು ಸುಲಿಗೆ ಮಾಡಲು ಆನ್‍ಲೈನ್ ತರಗತಿ ನೆಪದಲ್ಲಿ ಹಗಲು ದರೋಡೆಗೆ ಇಳಿದಿದ್ದರೆ ಮತ್ತೊಂದೆಡೆ ಡಿಜಿಟಲ್ ಕಂಪನಿಗಳು ಇದನ್ನೇ ಬಂಡವಾಳವಾಗಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿವೆ. ಆನ್‍ಲೈನ್ ಶಿಕ್ಷಣದ ಹಿಂದೆ ಡಿಜಿಟಲ್ ಪರಿಕರಗಳ ಮಾರ್ಕೆಟಿಂಗ್ ಪ್ರಭಾವವೂ ಇದೆ.

ಬಹುತೇಕ ಖಾಸಗಿ ಶಾಲೆಗಳು ರಾಜಕಾರಣಿಗಳು ಹಾಗೂ ಪ್ರತಿಷ್ಠಿತರ ಟ್ರಸ್ಟ್‍ಗಳ ವಾರಸುದಾರಿಕೆಯಲ್ಲಿಯೇ ಇವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಈ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿ, ಜನಸಾಮಾನ್ಯರಿಗೆ ಯಾವ ರೀತಿ ನೆರವಾಗುತ್ತದೆ, ಹೇಗೆ ಮಕ್ಕಳ ಭವಿಷ್ಯಕ್ಕೆ ಬೆಳಕಾಗುತ್ತದೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ರಾಜ್ಯದಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿವರಗಳನ್ನು ನೋಡುವುದಾದರೆ; 19,596 ಖಾಸಗಿ ಶಾಲಾ ಮತ್ತು ಕಾಲೇಜುಗಳಿವೆ. 6800 ಅನುದಾನಿತ ಶಾಲೆಗಳಿದ್ದರೆ, 796 ಅನುದಾನಿತ ಕಾಲೇಜುಗಳಿವೆ. 1229 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು, 5240 ಸರ್ಕಾರಿ ಪ್ರೌಢಶಾಲೆಗಳು, 44615 ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದು; ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅಜಗಜತರ ವ್ಯತ್ಯಾಸವಿದೆ.

ಸರ್ಕಾರಿ ಶಾಲೆಗಳು ಅವ್ಯವಸ್ಥೆಯ ಆಗರವಾಗಿರುವ ಹಿನ್ನೆಲೆಯಲ್ಲಿ ಶ್ರೀಮಂತರು, ಮಧ್ಯಮ ವರ್ಗದ ಜನ ಖಾಸಗಿ ಶಾಲೆಗಳನ್ನೇ ಹೆಚ್ಚಾಗಿ ನಂಬಿದ್ದಾರೆ. ಉಳ್ಳವರು ಡೊನೇಷನ್, ಶುಲ್ಕ ಎಲ್ಲವನ್ನೂ ಅನಾಯಾಸವಾಗಿ ಕಟ್ಟುತ್ತಾರೆ. ಆದರೆ ಮಧ್ಯಮ ವರ್ಗದವರು ಶುಲ್ಕ ಪಾವತಿಗೆ ಹೆಣಗಾಡುವಾಗ ಈ ಹೆಚ್ಚುವರಿ ಶುಲ್ಕವನ್ನು ಅದರಲ್ಲೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಹೇಗೆ ತಾನೇ ಭರಿಸಲು ಸಾಧ್ಯ?

ಈಗ ಆನ್‍ಲೈನ್ ಎಂಬ ಪೆಡಂಭೂತ ಅಂಟಿಕೊಂಡಿದೆ. ಮಕ್ಕಳನ್ನು ಮೊಬೈಲ್ ಶಿಕ್ಷಣಕ್ಕೆ ಅಣಿಗೊಳಿಸುತ್ತಾರೋ ಇಲ್ಲ; ಜೀವನದ ಬಂಡಿ ಸಾಗಿಸುತ್ತಾರೋ? ಈ ಇಬ್ಬಂದಿತನದಲ್ಲಿ ಪೋಷಕರು ನಲುಗಿ ಹೋಗಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಇದಾವುದರ ಪರಿವೆಯೇ ಇಲ್ಲದಂತೆ ಹಣ ಮಾಡುವ ಹಪಾಹಪಿಗೆ ಬಿದ್ದು ಹಣಕ್ಕಾಗಿ ಪೀಡಿಸುತ್ತಲೇ ಇವೆ.
ಬೆಚ್ಚಿಬಿದ್ದಿರುವ ಪೋಷಕರು ಫೀಸು ಕಟ್ಟಲು ಹೆಣಗಾಡುತ್ತಿರುವುದರ ಜತೆಗೆ ಸರ್ಕಾರದತ್ತ ಮುಖ ಮಾಡಿ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Facebook Comments