ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲೆಗಳ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ‍್ಯಾಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.23- ಶುಲ್ಕ ಕಡಿತ ವಿರೋಧಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಯವರು ನಗರದಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರದ ಕ್ರಮವನ್ನು ಖಂಡಿಸಿದರು.ಶೇ.30ರಷ್ಟು ಶುಲ್ಕ ಕಡಿತ ಮಾಡಿರುವುದರಿಂದ ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ಖಾಸಗಿ ಶಾಲಾ ಆಡಳಿತ ಮಂಡಳಿ ಬೋಧಕ-ಬೋಧಕೇತರ ಸಿಬ್ಬಂದಿ ಸಮನ್ವಯ ಸಮಿತಿ ವತಿಯಿಂದ ಮೆಜಸ್ಟಿಕ್ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್‍ವರೆಗೆ ಸಾವಿರಾರು ಶಾಲಾ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಬೃಹತ್ ರ್ಯಾಲಿ ನಡೆಸಿ ಸರ್ಕಾರ ಈ ಕ್ರಮವನ್ನು ಹಿಂಪಡೆಯುವಂತೆ ಆಗ್ರಹಿಸಿದರು.

ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಿಕ್ಕಮಗಳೂರು, ಶಿವಮೊಗ್ಗ, ಬೆಳಗಾವಿ, ರಾಯಚೂರು, ಗುಲ್ಬರ್ಗಾ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಶಿಕ್ಷಕರು ಶುಲ್ಕ ಕಡಿತವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಪುಟ್ಟಣ್ಣ, ಸಂಘಟನೆ ಸಂಚಾಲಕ ಡಿ.ಶಶಿಕುಮಾರ್ ಮುಂತಾದವರು ಸರ್ಕಾರದ ಕ್ರಮವನ್ನು ಖಂಡಿಸಿ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸುವುದೇ ದುಸ್ತರವಾಗಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮತ್ತು ಇಲ್ಲಿನ ಸಿಬ್ಬಂದಿಗೆ ಯಾವುದೇ ನೆರವು ನೀಡಲಿಲ್ಲ.

ಸಾಲ ಮಾಡಿ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಸಂದರ್ಭದಲ್ಲಿ ಸಾಲದ ಕಂತು ಕಟ್ಟಲು ಸಮಯಾವಕಾಶ ಕೂಡ ನೀಡಿಲ್ಲ. ವಿದ್ಯುತ್ ಬಿಲ್ ಪಾವತಿ ಮತ್ತಿತರ ಯಾವುದೇ ರಿಯಾಯಿತಿಗಳನ್ನು ಕೂಡ ಸರ್ಕಾರ ನೀಡಿಲ್ಲ. ಈಗ ಏಕಾಏಕಿ ಶೇ.30ರಷ್ಟು ಶುಲ್ಕ ಕಡಿತಗೊಳಿಸಿದರೆ ನಾವು ಸಿಬ್ಬಂದಿಗೆ ಸಂಬಳ ಕೊಡುವುದು ಹೇಗೆ ಎಂದು ಪ್ರಶ್ನಿಸಿದರು.

ಶಿಕ್ಷಣ ಸಂಸ್ಥೆಗಳ ಆರ್ಥಿಕ ಸಂಕಷ್ಟ, ಅವೈಜ್ಞಾನಿಕ ಶುಲ್ಕ ಕಡಿತ, ಕೋವಿಡ್-19 ಸಂಕಷ್ಟದಲ್ಲೂ ಹಳೆಯ ಶಾಲೆಗಳಿಗೆ ಹೊಸ ಶಾಲೆಗಳ ಶರತ್ತು ವಿಸಿ ಮಾನ್ಯತೆ ನವೀಕರಣದ ಹೆಸರಿನಲ್ಲಿ ಭ್ರಷ್ಟಾಚಾರ, ಶಾಲೆಗಳಿಗೆ ಕಡ್ಡಾಯ ದಾಖಲಾತಿ, ಹಾಜರಾತಿ, ಕನಿಷ್ಟ ಮೌಲ್ಯಮಾಪನಕ್ಕೆ ಒತ್ತು ನೀಡದೆ ಇರುವುದು, ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಿಗೆ 371(ಜೆ) ಅಡಿಯಲ್ಲಿ ಬೇಡಿಕೆಗಳ ಈಡೇರಿಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪ್ರಾಥಮಿಕ ಶಾಲಾ ಪುನರಾರಂಭದ ಗೊಂದಲ, ಆರ್‍ಟಿಇ ಮರುಪಾವತಿಯಾಗದೆ ಕಿರುಕುಳ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಶಿಕ್ಷಣ ಇಲಾಖೆ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಶಿಕ್ಷಣ ಸಚಿವರ ದ್ವಂದ್ವ ನಿಲುವಿನಿಂದ ನಾವು ಅತಂತ್ರರಾಗಿದ್ದೇವೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲವರು ಕೆಲಸ ಕಳೆದುಕೊಂಡಿದ್ದಾರೆ ಮತ್ತು ಹಲವರು ಸಂಬಳ ಕಡಿತಕ್ಕೆ ಒಳಗಾಗಿದ್ದಾರೆ.

ಸರ್ಕಾರ ಶುಲ್ಕ ಕಡಿತ ಕ್ರಮವನ್ನು ಹಿಂಪಡೆಯಬೇಕು. ಗ್ರಾಮೀಣ ಪ್ರದೇಶದಲ್ಲಿರುವ ಶಾಲೆಗಳನ್ನು ನಡೆಸುವುದಕ್ಕೂ, ನಗರ ಪ್ರದೇಶದಲ್ಲಿರುವ ಕಾರ್ಪೊರೇಟ್ ಶಾಲೆಗಳನ್ನು ನಡೆಸುವುದಕ್ಕೂ ವ್ಯತ್ಯಾಸವಿದೆ. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಿ ಕ್ರಮ ಕೈಗೊಳ್ಳಬೇಕು. ಏಕಾಏಕಿ ನಿರ್ಧಾರ ಕೈಗೊಂಡಿದ್ದರಿಂದ ತೊಂದರೆಯಾಗಿ ಶಿಕ್ಷಕರು ಬೀದಿಗಿಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

Facebook Comments

Sri Raghav

Admin