ಫೀಸ್ ಬಂದ್ರೂ ಶಿಕ್ಷಕರಿಗಿಲ್ಲ ಸ್ಯಾಲರಿ, ಖಾಸಗಿ ಶಾಲೆಗಳ ಅಂಧ ದರ್ಬಾರ್’ಗೆ ಬ್ರೇಕ್ ಹಾಕೋರು ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

# ಕೆ.ಎಸ್. ಜನಾರ್ಧನ್

ಬೆಂಗಳೂರು,ಸೆ.7- ಖಾಸಗಿ ಶಾಲಾ ಶಿಕ್ಷಕರ ಗೋಳು ಕೇಳುವವರು ಯಾರು? ಖಾಸಗಿ ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಸರ್ಕಾರದ ಅಂಧ ದರ್ಬಾರ್‍ನಿಂದ ಸುಮಾರು 40 ಸಾವಿರ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ. 2 ಲಕ್ಷ ಶಿಕ್ಷಕರಿಗೆ ವೇತನವಿಲ್ಲದೆ ಅವರ ಬದುಕು ಬೀದಿಗೆ ಬಿದ್ದಿದೆ.

ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು ಶಿಕ್ಷಕರಿಗೆ ಕಳೆದ ಮಾರ್ಚ್‍ನಿಂದ ಅಂದರೆ ಆರು ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಶಿಕ್ಷಕರು ಬದುಕಿಗಾಗಿ ನರೇಗಾ ಮತ್ತಿತರ ಕೂಲಿಕೆಲಸಗಳ ಮೊರೆ ಹೋಗಿದ್ದಾರೆ.

ನಗರ ಪ್ರದೇಶಗಳಲ್ಲಿ ಹಣ್ಣು, ತರಕಾರಿ, ಹೂವು ಮಾರಾಟ, ಮತ್ತೆ ಕೆಲವರು ಫುಟ್‍ಪಾತ್‍ಗಳಲ್ಲಿ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ. ಮಹಿಳಾ ಶಿಕ್ಷಕರು ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ಮತ್ತಿತರ ಗೃಹಪಯೋಗಿ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ. ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರು ತಮಗೆ ಕನಿಷ್ಠ ವೇತನ ಕೊಡಿಸುವಂತೆ ಸರ್ಕಾರದ ಗಮನಸೆಳೆಯಲು ಹಲವಾರು ಪ್ರತಿಭಟನೆಗಳನ್ನು ನಡೆಸಿದರು.

ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್‍ನ್ನು ನೀಡಬೇಕೆಂದು ಆಗ್ರಹಿಸಿ ಹಲವಾರು ಧರಣಿ, ಸತ್ಯಾಗ್ರಹ ನಡೆಸಿದರೂ ಸರ್ಕಾರಕ್ಕೆ ಕರುಣೆ ಬರಲಿಲ್ಲ. ಶಿಕ್ಷಕರ ಸಮಸ್ಯೆಗಳ ಪರಿಹರಿಸಬೇಕೆಂದು ಒತ್ತಾಯಿಸಿ ಖುದ್ದು ಮಾಜಿ ಪ್ರಧಾನಿ ದೇವೇಗೌಡರೇ ಪ್ರತಿಭಟನೆ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.

ಇತ್ತ ಖಾಸಗಿ ಆಡಳಿತ ಮಂಡಳಿಯವರು ಕ್ಯಾರೇ ಎನ್ನುತ್ತಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರ ಬದುಕು ತ್ರಿಶಂಕು ಸ್ಥಿತಿಯಲ್ಲಿದೆ. ಇತ್ತ ಕೆಲಸವನ್ನು ಬಿಡುವಂತೆಯೂ ಇಲ್ಲ. ಅತ್ತ ಬೇರೆ ಕೆಲಸಗಳು ಸಿಗುತ್ತಲೇ ಇಲ್ಲ. ಬದುಕಿಗಾಗಿ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು ಸಂಬಳದ ನಿರೀಕ್ಷೆಯಲ್ಲಿ 6 ತಿಂಗಳಿನಿಂದ ಕಾಯುತ್ತಿದ್ದಾರೆ.

ಮಕ್ಕಳ ಭವಿಷ್ಯ ರೂಪಿಸಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಹಗಲಿರುಳು ಶ್ರಮಿಸುವ ಈ ಶಿಕ್ಷಕರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ನೋವನ್ನು ಸರ್ಕಾರದ ಬಳಿ ಹಲವಾರು ರೀತಿಯಲ್ಲಿ ಹೇಳಿಕೊಂಡರಾದರೂ ಯಾವುದೇ ಪ್ರಯೋಜನವಾಗಿಲ್ಲ.

ಕಳೆದ ಆಗಸ್ಟ್‍ನಿಂದಲೇ ಶಾಲೆಗಳ ಪ್ರವೇಶಾತಿ ಪ್ರಾರಂಭವಾಗಿದೆ. ಆಡಳಿತ ಮಂಡಳಿಯವರಿಗೆ ಹಣ ಬರಲಾರಂಭಿಸಿದೆ. ಕೊರೊನಾ ಸಂಕಷ್ಟವಿದೆ ಎಂದು ಯಾವ ಶುಲ್ಕವನ್ನೂ ಕಡಿಮೆ ಮಾಡಿಲ್ಲ. ಆನ್‍ಲೈನ್ ಶಿಕ್ಷಣದ ಶುಲ್ಕ ಸೇರಿದಂತೆ ಎಲ್ಲಾ ಶುಲ್ಕವನ್ನು ಫೋಷಕರಿಂದ ವಸೂಲಿ ಮಾಡುತ್ತಿದ್ದಾರೆ. ಈ ಬಾರಿ ಸ್ವಲ್ಪ ಹೆಚ್ಚುವರಿ ಶುಲ್ಕವನ್ನೇ ಪಡೆದಿದ್ದಾರೆ.
ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ನಾಲ್ಕು ತಿಂಗಳು ಶಾಲೆಗಳು ನಡೆಯದಿದ್ದರೂ ಕೂಡ ಬೋಧನಾ ಶುಲ್ಕ ವಿನಾಯ್ತಿಯನ್ನು ನೀಡಿಲ್ಲ. ಪ್ರವೇಶದ ಸಂದರ್ಭದಲ್ಲಿ ಎಲ್ಲವನ್ನೂ ಸೇರಿಸಿಯೇ ಪಡೆದುಕೊಂಡಿದ್ದಾರೆ. ಆದರೆ ಶಿಕ್ಷಕರಿಗೆ ವೇತನ ನೀಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ.

ಬಾಕಿ ವೇತನವನ್ನೂ ಸೇರಿ ಎಲ್ಲಾ ವೇತನ ನೀಡಿದರೆ ಶಿಕ್ಷಕರಿಗೆ ಅನುಕೂಲವಾಗುತ್ತದೆ. ಆದರೆ ಕೆಲವೇ ಕೆಲವು ಖಾಸಗಿ ಶಾಲೆಯವರು ತಮ್ಮ ಶಿಕ್ಷಕರಿಗೆ ವೇತನ ಪಾವತಿಸಿರುವುದನ್ನು ಬಿಟ್ಟರೆ ಬಹುತೇಕ ಶಾಲೆಯವರು ಶಿಕ್ಷಕರಿಗೆ ವೇತನ ನೀಡಲ್ಲವೆಂದು ಬಹಳಷ್ಟು ಶಿಕ್ಷಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರಾಜ್ಯದಲ್ಲಿ ಶೇ. 75ರಷ್ಟು ಖಾಸಗಿ ಶಾಲಾಕಾಲೇಜುಗಳಿವೆ. ಅನುದಾನಿತ, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಶಿಕ್ಷಕರು ಕೆಲಸ ನಿರ್ವಹಿಸುತ್ತಿದ್ದಾರೆ. ತಮಗೆ ಬರುವ ವೇತನದಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿನಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.  ಸರ್ಕಾರದಿಂದ ಯಾವುದೇ ನೆರವು ಇಲ್ಲದೆ ಬೇರೆ ಮೂಲಗಳಿಂದ ಸಹಾಯವೂ ಸಿಗದೆ ಬದುಕಲು ಪರ್ಯಾಯ ಮಾರ್ಗಗಳಿಲ್ಲದೆ ಜೀವನ ಸಾಗಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ ಗೋಳು ಹೇಳತೀರದಾಗಿದೆ.

ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಗಳನ್ನು ರದ್ದು ಮಾಡಲಾಯಿತು. ಆದರೆ ಕರ್ನಾಟಕ ರಾಜ್ಯದಲ್ಲಿ ಈ ಎರಡೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು. ಇದಕ್ಕೆ ಕಾರಣ ನಮ್ಮ ಶಾಲಾ ಶಿಕ್ಷಕರು. ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಸ್ಪಂದಿಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದು ಉತ್ತಮ ಫಲಿತಾಂಶ ಬರಲು ಕಾರಣವಾದರು. ಇದರ ಶ್ರೇಯಸ್ಸು ಶಿಕ್ಷಕರಿಗೆ ಸಲ್ಲಬೇಕು.

ಗಣತಿ, ಕೋವಿಡ್-19 ಕೆಲಸ ಸೇರಿದಂತೆ ಅನೇಕ ಕೆಲಸಗಳನ್ನು ಶಿಕ್ಷಕರಿಂದಲೇ ಸರ್ಕಾರ ಸಮೀಕ್ಷೆ ಮಾಡಿಸುತ್ತಿದೆ.  ಕಷ್ಟದಲ್ಲಿರುವ ಅವರಿಗೆ ಸರ್ಕಾರ ಕೊಟ್ಟಿರುವುದಾದರೂ ಏನು? ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೇ ಅತಿಹೆಚ್ಚು ಫಲಿತಾಂಶ ಬರಲು ಕಾರಣರಾದವರು ಶಿಕ್ಷಕರು.

ಶೇ.100ಕ್ಕೆ ನೂರರಷ್ಟು ಫಲಿತಾಂಶ ಬಂದಿದೆ ಎಂದು ದೊಡ್ಡ ದೊಡ್ಡ ಬ್ಯಾನರ್, ಫೋಸ್ಟರ್‍ಗಳನ್ನು ಹಾಕಿಕೊಂಡು ಬಿಂಬಿಸುವ ಶಿಕ್ಷಣ ಸಂಸ್ಥೆಯವರು ಇದಕ್ಕೆ ಕಾರಣಕರ್ತರಾದ ಶಿಕ್ಷಕರಿಗೆ ಸರಿಯಾಗಿ ಸಂಬಳವನ್ನೇ ನೀಡಿಲ್ಲ ಎಂಬ ಕೊರಗು ಕಾಡುತ್ತಿದೆ. ಕೆಲ ಖಾಸಗಿ ಆಡಳಿತ ಮಂಡಳಿಯವರು ಭಾಗಶಃ, ಮತ್ತೆ ಕೆಲ ಆಡಳಿತ ಮಂಡಳಿಗಳು ಅರ್ಧ ವೇತನ ನೀಡಿದ್ದರೆ, ಇನ್ನು ಕೆಲವು ಆಡಳಿತ ಮಂಡಳಿಗಳು ವೇತನವನ್ನೇ ನೀಡಿಲ್ಲ. ಕಳೆದ ನಾಲ್ಕು ತಿಂಗಳಿನಿಂದಲೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ತೀವ್ರ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.

ಆಡಳಿತ ಮಂಡಳಿಗಳನ್ನು ಕೇಳಿದರೆ ಆರ್‍ಟಿಇ ಶುಲ್ಕದ ಬಾಕಿ ಸರ್ಕಾರದಿಂದ ಬರಬೇಕು. ಅದು ಬಂದರೆ ನಾವು ವೇತನ ಕೊಡಲು ಅನುಕೂಲವಾಗುತ್ತದೆ ಎಂದು ಹೇಳುತ್ತಾರೆ. ಆರ್ಥಿಕವಾಗಿ ತೀವ್ರ ದುಸ್ಥಿತಿಯಲ್ಲಿರುವ ಖಾಸಗಿ ಶಾಲೆಗಳ ಶಿಕ್ಷಕರ ನೆರವಿಗೆ ಶಿಕ್ಷಣ ಇಲಾಖೆಯು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರು ಧಾವಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್‍ಕುಮಾರ್ ಮನವಿ ಮಾಡಿದ್ದರು.

ಸಂಕಷ್ಟದ ಸಮಯದಲ್ಲಿ ಅವರ ನೆರವಿಗೆ ಧಾವಿಸುವುದು ಅಗತ್ಯ. ಹಾಗಾಗಿ ಶಿಕ್ಷಕ ಬಂಧುಗಳು ತಮ್ಮ ಒಂದೆರಡು ದಿನದ ವೇತನವನ್ನು ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಈ ಮನವಿ ಏನಾಯಿತು? ಈ ಯೋಜನೆಯ ಮೂಲಕ ಯಾರಿಗೆ ಹಣ ತಲುಪಿತು? ಎಂಬುದರ ಬಗ್ಗೆ ಈವರೆಗೆ ವಿವರವಿಲ್ಲ.

ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ಪರೀಕ್ಷೆ ಮೌಲ್ಯಮಾಪನ ಯಾವುದನ್ನೂ ಬಹಿಷ್ಕರಿಸದೆ ಎಲ್ಲದರಲ್ಲೂ ಪಾಲ್ಗೊಂಡು ಕರ್ತವ್ಯ ನಿರ್ವಹಿಸಿದ ಶಿಕ್ಷಕರಿಗೆ ಪರಿಸ್ಥಿತಿ ಸುಧಾರಿಸುವವರೆಗೆ ರಾಜ್ಯ ಸರ್ಕಾರ 5ರಿಂದ 10 ಸಾವಿರ ರೂ. ವಿಶೇಷ ಪ್ಯಾಕೇಜ್ ನೀಡಬೇಕೆಂದು ಶಿಕ್ಷಕರ ಫೋರಂ ಅಧ್ಯಕ್ಷ ಎ.ಪಿ.ರಂಗನಾಥ್ ಮನವಿ ಮಾಡಿದ್ದರು.

ಇಷ್ಟೆಲ್ಲಾ ಮನವಿ, ಪ್ರತಿಭಟನೆ, ಧರಣಿಗಳ ನಡುವೆಯೂ ಸಂಬಳವಿಲ್ಲದೆ ಶಿಕ್ಷಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇನ್ನೇನು ವಿದ್ಯಾರ್ಥಿಗಳ ಪ್ರವೇಶಾತಿ ಆರಂಭವಾಗಿ ಮುಗಿಯುವ ಹಂತಕ್ಕೆ ಬಂದಿದೆ. ಮುಂದಿನ ತಿಂಗಳಿನಿಂದ ಶಾಲೆಗಳು ಪ್ರಾರಂಭವಾಗಲಿವೆ. ಇವೆಲ್ಲದರ ನಡುವೆ ಅತಂತ್ರದಲ್ಲಿರುವ ಶಿಕ್ಷಕರ ಬದುಕು ರೂಪಿಸಲು ಸರ್ಕಾರ ಯಾವುದೇ ಕ್ರಮ ಈವರೆಗೆ ಕೈಗೊಂಡಿಲ್ಲ.

ಖಾಸಗಿ ಆಡಳಿತ ಮಂಡಳಿಯವರು ತಮ್ಮ ಉಡಾಫೆ ಧೋರಣೆಯನ್ನು ಮುಂದುವರೆಸಿದ್ದಾರೆ. ಸರ್ಕಾರ ಮತ್ತದೆ ನಿರ್ಲಕ್ಷ್ಯ ಧೋರಣೆಯನ್ನು ತಾಳಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಶಿಕ್ಷಕರ ಪಾಡೇನು?

ಸರ್ಕಾರಿ ಶಾಲಾ ಶಿಕ್ಷಕರ ವೇತನವೇನೋ ನಿರಂತರವಾಗಿ ಪಾವತಿಯಾಗುತ್ತಿದೆ. ಅವರಿಗೆ ಶಾಲೆಗಳು ಇಲ್ಲದಿದ್ದರೆ ಬೇರೆ ಕೆಲಸಗಳನ್ನು ನೀಡಿ ಸರ್ಕಾರ ವೇತನ ಕೊಡುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗದ ಕಾರಣ ವಿದ್ಯಾಗಮ ಯೋಜನೆ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ. ಈ ಮೂಲಕ ಶಿಕ್ಷಕರನ್ನು ಕೆಲಸದಲ್ಲಿ ತೊಡಗಿಸಿಕೊಂಡು ವೇತನ ನೀಡುತ್ತಿವೆ. ಆದರೆ ಲಕ್ಷಾಂತರ ಖಾಸಗಿ ಶಾಲಾ ಶಿಕ್ಷಕರ ಪಾಡೇನು…?

 

Facebook Comments